Site icon Vistara News

Mukesh Ambani: ರಿಲಯನ್ಸ್‌ ಸಿಬ್ಬಂದಿಗೆ 1,500 ಕೋಟಿ ರೂ. ಮೌಲ್ಯದ ಉಡುಗೊರೆ ನೀಡಿದ ಅಂಬಾನಿ; ಯಾರು ಈ ಅದೃಷ್ಟವಂತ?

ambani manoj

ambani manoj

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ನ (Reliance Industries) ಚೇರ್‌ಮನ್‌ ಮುಖೇಶ್‌ ಅಂಬಾನಿ (Mukesh Ambani) ಭಾರತದ ಶ್ರೀಮಂತ ವ್ಯಕ್ತಿ. ಅಂಬಾನಿ ಕಂಪೆನಿ ಚಿಲ್ಲರೆ ವ್ಯಾಪಾರ, ಪೆಟ್ರೋಕೆಮಿಕಲ್ಸ್ ಮತ್ತು ಟೆಲಿಕಾಂನಂತಹ ಕ್ಷೇತ್ರಗಳಲ್ಲಿ ಇಂದಿಗೂ ಎತ್ತರದ ಸ್ಥಾನದಲ್ಲಿದೆ. ಮುಕೇಶ್ ಅಂಬಾನಿ ಅವರ ದೂರದರ್ಶಿತ್ವ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರನ್ನು ಇತರ ಉದ್ಯಮಿಗಳಿಗಿಂತ ಭಿನ್ನವಾಗಿರುವಂತೆ ಮಾಡುವ ಮುಖ್ಯ ವಿಚಾರವೊಂದಿದೆ. ಅದುವೇ ಅವರು ತಮ್ಮ ಉದ್ಯೋಗಿಗಳೊಂದಿಗೆ ಹೊಂದಿರುವ ಸ್ನೇಹ ಬಂಧ. ಅವರು ತಮ್ಮ ಕಂಪೆನಿಯ ಸಿಬ್ಬಂದಿಯನ್ನು ಕುಟುಂಬದ ಸದಸ್ಯರೆಂದೇ ಪರಿಗಣಿಸುತ್ತಾರೆ.

1,500 ಕೋಟಿ ರೂ. ಮೌಲ್ಯದ ಬಂಗಲೆ ಉಡುಗೊರೆ

ಮುಕೇಶ್ ಅಂಬಾನಿ ತಮ್ಮ ಸಿಬ್ಬಂದಿಯನ್ನು ಮನೆಯವರಂತೆ ನೋಡಿಕೊಳ್ಳುತ್ತಾರೆ ಎನ್ನುವುದಕ್ಕೆ ನಿದರ್ಶನ ಇಲ್ಲಿದೆ. ಅವರು ಎಲ್ಲರಲ್ಲೂ ಅಚ್ಚರಿ ಮೂಡಿಸಿ ಕಂಪೆನಿಯ ಸಿಬ್ಬಂದಿಯೊಬ್ಬರಿಗೆ 1,500 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ವರದಿ ಪ್ರಕಾರ ಮುಕೇಶ್ ಅಂಬಾನಿ ಮುಂಬೈಯಲ್ಲಿರುವ ತಮ್ಮ ಆಸ್ತಿಯನ್ನು ಆಪ್ತ ಮನೋಜ್‌ ಮೋದಿಗೆ ಉಡುಗೊರೆಯಾಗಿ ಹಸ್ತಾಂತರಿಸಿದ್ದಾರೆ. ಈ ಆಸ್ತಿ ಮುಂಬಯಿಯ ಪ್ರತಿಷ್ಠಿತ ನಪೀನ್‌ ಸಮುದ್ರ ದಂಡೆಯ ರಸ್ತೆಯಲ್ಲಿದೆ. ಈ ಕಟ್ಟಡ 1.7 ಲಕ್ಷ ಚದರ ಅಡಿ ಹರಡಿದೆ. ಮನೋಜ್‌ ಮೋದಿ ತಮ್ಮ ಕುಟುಂಬದ ಜತೆ ಇಲ್ಲಿ ವಾಸವಾಗಿದ್ದಾರೆ.

ಮನೋಜ್‌ ಮೋದಿ ಅವರನ್ನು ಮುಕೇಶ್ ಅಂಬಾನಿ ಅವರ ಬಲಗೈ ಎಂದೇ ಹೇಳಲಾಗುತ್ತದೆ. ವಿಶೇಷ ಎಂದರೆ ಇವರಿಬ್ಬರು ಒಟ್ಟಿಗೆ ಕಾಲೇಜು ಓದಿದವರು. ಕೆಮಿಕಲ್‌ ಟೆಕ್ನಾಲಜಿಯಲ್ಲಿ ಓದುತ್ತಿರುವಾಗಲೇ ಅಂಬಾನಿ ಮತ್ತು ಮನೋಜ್‌ ಮೋದಿ ಸ್ನೇಹಿತರಾಗಿದ್ದರು.

ಸಲಹೆಗಾರ

ಮನೋಜ್‌ ಮೋದಿ ಉತ್ತಮ ಸ್ನೇಹಿತ ಮಾತ್ರವಲ್ಲ ಅಂಬಾನಿ ಪಾಲಿಗೆ ಸಲಹೆಗಾರನೂ ಹೌದು. 2020ರ ಏಪ್ರಿಲ್‌ನಲ್ಲಿ ನಡೆದ ರಿಲಯನ್ಸ್‌ ಜಿಯೋ ಮತ್ತು ಫೇಸ್‌ಬುಕ್‌ ಒಪ್ಪಂದದ ಹಿಂದಿನ ಮುಖ್ಯ ಸೂತ್ರಧಾರ ಮನೋಜ್‌ ಮೋದಿ. ಅಂದಿನ ಒಪ್ಪಂದದ ಪ್ರಕಾರ ಫೇಸ್‌ಬುಕ್‌ ರಿಲಯನ್ಸ್ ಜಿಯೋದ 9.99% ಪಾಲನ್ನು 43,574 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ವರದಿಗಳ ಪ್ರಕಾರ ಮನೋಜ್ ಮೋದಿ ಈ ಒಪ್ಪಂದದಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದರು. ಮುಖೇಶ್‌ ಅಂಬಾನಿ ಮಾತ್ರವಲ್ಲ ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರೊಂದಿಗೆ ಮನೋಜ್ ಮೋದಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಇದನ್ನೂ ಓದಿ: Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.

ಮನೋಜ್‌ ಮೋದಿ ರಿಲಯನ್ಸ್‌ ರೀಟೆಲ್‌ ಲಿಮಿಟೆಡ್‌ (Reliance Retail Ltd.) ಮತ್ತು ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್‌ (Reliance Jio Infocomm Ltd.) ನ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವು ಹಿರಿಯ ವ್ಯವಹಾರ ಕಾರ್ಯನಿರ್ವಾಹಕರ ಪ್ರಕಾರ, ಮನೋಜ್ ಮೋದಿ ವ್ಯವಹಾರಗಳನ್ನು ಉತ್ತಮವಾಗಿ ಪಳಗಿದ್ದಾರೆ. ಸ್ಟಾರ್ಟ್ಅಪ್‌ಗಳೊಂದಿಗೆ ವ್ಯವಹಾರ ಕುದುರಿಸುವಲ್ಲಿ ಅವರದ್ದು ಎತ್ತಿದ ಕೈ.

1980ರ ಸುಮಾರಿನಲ್ಲಿ ಮನೋಜ್‌ ಮೋದಿ ರಿಲಯನ್ಸ್‌ ಕಂಪೆನಿಗೆ ಸೇರಿದ್ದರು. ಆಗ ಕಂಪೆನಿಯನ್ನು ಮುಕೇಶ್ ಅಂಬಾನಿ ಅವರ ತಂದೆ ಧೀರೂ ಬಾಯಿ ಅಂಬಾನಿ ಮುನ್ನಡೆಸುತ್ತಿದ್ದರು. ಅಲ್ಲಿಂದ ಮತ್ತೆ ಮನೋಜ್‌ ಮೋದಿ ಹಿಂದಿರುಗಿ ನೋಡಲೇ ಇಲ್ಲ. ಸುಮಾರು ದಶಕಗಳ ಕಾಲ ಮುಕೇಶ್ ಅಂಬಾನಿ ಜತೆ ಕೆಲ ನಿರ್ವಹಿಸಿದ ಅವರು ಇದೀಗ ಆಕಾಶ್‌ ಅಂಬಾನಿ ಮತ್ತು ಇಶಾ ಅಂಬಾನಿ ಜತೆಗೂ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version