ಶ್ರೀನಗರ: ಮಹಾತ್ಮ ಗಾಂಧೀಜಿಯವರ ಇಷ್ಟದ ಭಜನೆ ಗೀತೆಯಾದ “ರಘುಪತಿ ರಾಘವ ರಾಜಾರಾಮ್” ಅನ್ನು ಜಮ್ಮು-ಕಾಶ್ಮೀರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಹಾಡಿದ್ದು ಈಗ ವಿವಾದಕ್ಕೆ (Bhajan Issue) ಕಾರಣವಾಗಿದೆ. ಕಣಿವೆಯ ಶಾಲೆಗಳಲ್ಲಿ ಈ ಭಜನೆ ಗೀತೆ ಹಾಡಿದ್ದಕ್ಕೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿಯು ಹಿಂದುತ್ವ ಅಜೆಂಡಾವನ್ನು ಹೇರುತ್ತಿರುವುದರ ಲಕ್ಷಣ ಎಂದಿದ್ದಾರೆ. ಇದಕ್ಕೆ ಬಿಜೆಪಿಯೂ ತಿರುಗೇಟು ನೀಡಿದೆ.
ವಿದ್ಯಾರ್ಥಿಗಳು ಸ್ತೋತ್ರ ಹಾಡುತ್ತಿರುವ ವಿಡಿಯೊ ಹಂಚಿಕೊಂಡಿರುವ ಮುಫ್ತಿ, “ಕಾಶ್ಮೀರದಲ್ಲಿ ಧಾರ್ಮಿಕ ಮುಖಂಡರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಜಾಮಾ ಮಸೀದಿಯನ್ನು ಮುಚ್ಚಲಾಗಿದೆ. ಈಗ ಶಾಲೆಗಳಲ್ಲಿ ಮಕ್ಕಳು ಸ್ತೋತ್ರ ಹೇಳುವಂತೆ ನಿರ್ದೇಶಿಸಲಾಗಿದೆ. ಇದೆಲ್ಲ ಕೇಂದ್ರ ಸರ್ಕಾರವು ಹಿಂದುತ್ವವನ್ನು ಹೇರುತ್ತಿರುವುದರ ಸಂಕೇತ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಫ್ತಿ ಆರೋಪಕ್ಕೆ ಬಿಜೆಪಿ ಮುಖಂಡ ಕವಿಂದರ್ ಗುಪ್ತಾ ತಿರುಗೇಟು ನೀಡಿದ್ದಾರೆ. “ಮೆಹಬೂಬಾ ಮುಫ್ತಿ ಅವರು ಕಣಿವೆಯಲ್ಲಿ ಪ್ರತಿಯೊಂದು ವಿಷಯವನ್ನೂ ವಿವಾದವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ರಘುಪತಿ ರಾಘವ ರಾಜಾರಾಮ್ ಭಜನೆಯಲ್ಲಿ ಈಶ್ವರ ಅಲ್ಲಾ ತೇರೆನಾಮ್ ಎಂಬ ಸಾಲೂ ಇದೆ” ಎಂದಿದ್ದಾರೆ. ಶಾಲೆಯೊಂದರಲ್ಲಿ ಮಕ್ಕಳು ಭಜನೆ ಗೀತೆ ಹಾಡಿರುವ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ | ವಿಸ್ತಾರ Explainer | ಈಗ ಯಾರು ಬೇಕಿದ್ರೂ ಕಾಶ್ಮೀರದಲ್ಲಿ ವೋಟ್ ಮಾಡಬಹುದಾ?