Site icon Vistara News

Manipur Violence: ಹತ ಬಾಲಕ, ಬಾಲಕಿ ಅಪಹರಣಕಾರರ ಕೈಗೆ ಸಿಕ್ಕಿದ್ದು ಹೇಗೆ? ಹಿಂದಿದೆಯೇ ಪ್ರೇಮ ಕತೆ?

Manipur Couple Murder

ಇಂಫಾಲ: ಪ್ರೀತಿ ಕುರುಡು ಅಂತಾರೆ. ಅದರಲ್ಲೂ, ಕಾಲ್‌ ರಿಸೀವ್‌ ಮಾಡಿಲ್ಲ ಎಂದು ಪ್ರಿಯತಮೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು, ಪ್ರಿಯತಮೆ ಬಿಟ್ಟು ಹೋದಳು ಎಂದು ಹುಡುಗ ವಿಷ ಸೇವಿಸುವುದು ಸೇರಿ ಹಲವು ಪ್ರಕರಣಗಳು ಪ್ರೀತಿ ಕುರುಡು ಎಂಬುದಾಗಿ ಏಕೆ ಎನ್ನುತ್ತಾರೆ ಎಂಬುದಕ್ಕೆ ನಿದರ್ಶನ ಇದ್ದಂತೆ. ಅದರಂತೆ, ಹಿಂಸೆಪೀಡಿತ ಮಣಿಪುರದಲ್ಲೂ ಮೈತೈ ಸಮುದಾಯದ ಬಾಲಕ-ಬಾಲಕಿಯು ಮನೆ ಬಿಟ್ಟು ಓಡಿಹೋಗಿದ್ದು, ಕುಕಿ ಸಮುದಾಯದವರು ಇಬ್ಬರನ್ನೂ ಹತ್ಯೆ (Manipur Violence) ಮಾಡಿರುವುದು ಪೊಲೀಸರಿಂದ ಬಯಲಾಗಿದೆ.

ಏನಿದು ಪ್ರಕರಣ?

ಇಂಫಾಲದ ಕೈಶಂಪತ್‌ ಮುತುಮ್‌ ಲೈಖೈ ನಿವಾಸಿಯಾದ 17 ಬಾಲಕಿ ಹಾಗೂ ಹೇಮನ್‌ಜಿತ್‌ ಸಿಂಗ್‌ ಎಂಬ ಬಾಲಕ ಪ್ರೀತಿಸುತ್ತಿದ್ದರು. ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂಬುದು ಗೊತ್ತಿದ್ದರೂ ಇಬ್ಬರೂ ಮನೆಯಿಂದ ಓಡಿಹೋಗಲು ತೀರ್ಮಾನಿಸಿದ್ದರು. ಹಾಗಾಗಿ, ಜುಲೈ 6ರಂದು ಬಾಲಕಿಯನ್ನು ಟ್ಯೂಷನ್‌ ಸೆಂಟರ್‌ಗೆ ತೆರಳಿದ ಬಾಲಕನು ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ, ಇಬ್ಬರೂ ಕುಕಿ ಸಮುದಾಯದವರ ಕೈಗೆ ಸಿಕ್ಕ ಕಾರಣ, ಇಬ್ಬರನ್ನೂ ಕುಕಿ ಸಮುದಾಯದವರು ಹತ್ಯೆಗೈದಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ಮನೆಗೆ ಹೋಗಿ ಎಚ್ಚರಿಸಿದ್ದ ಜನ, ಪೊಲೀಸರು

ಹೇಮನ್‌ಜಿತ್‌ ಸಿಂಗ್‌ ಹಾಗೂ ಆತನ ಪ್ರಿಯತಮೆಯು ಮನೆ ಬಿಟ್ಟು ಓಡಿ ಹೋಗಿ, ಜೌಜಾಂಗ್‌ಟೆಕ್‌ ತೆರಳುವ ವೇಳೆ ಲೈಕಾ ಎಂಬ ಪ್ರದೇಶದ ಕಲ್ಲಿನ ಕ್ವಾರಿಯಲ್ಲಿ ತಿರುಗಾಡುತ್ತಿದ್ದರು. ಇಬ್ಬರನ್ನೂ ಕಂಡ ಸ್ಥಳೀಯರು ಹಾಗೂ ಪೊಲೀಸರು, “ನೀವು ಹೀಗೆ ಓಡಾಡುವುದು ಅಪಾಯಕಾರಿ. ಸುಮ್ಮನೆ ಮನೆಗೆ ಹೋಗಿ” ಎಂದು ಎಚ್ಚರಿಸಿದ್ದರು. ಆದರೆ, ಮನೆಗೆ ಹೋದರೆ ಪೋಷಕರ ವಿರೋಧವನ್ನು ಹೇಗೆ ಎದುರಿಸುವುದು, ಸಮಾಜ ಏನೆನ್ನುತ್ತದೆಯೋ ಎಂಬ ಭಯದಲ್ಲಿ ಇಬ್ಬರೂ ವಾಪಸ್‌ ಮನೆಗೆ ಹೋಗಿಲ್ಲ.

ಇದನ್ನೂ ಓದಿ: Manipur Violence: ಮಣಿಪುರ ಮತ್ತೆ ಉದ್ವಿಗ್ನ; ಇಂಫಾಲ ಡಿಸಿ ಕಚೇರಿ ಧ್ವಂಸ, ವಾಹನಗಳು ಭಸ್ಮ

ಅಪಹರಣಕಾರರಿಗೆ ಸಿಕ್ಕಿದ್ದು ಹೇಗೆ?

ಜುಲೈ 6ರಂದು ಬೈಕ್‌ ಹತ್ತಿ ಹೊರಟ ಜೋಡಿಯು ಕಲ್ಲಿನ ಕ್ವಾರಿಗಳ ಮಧ್ಯೆ ತಿರುಗಾಡುವಾಗಲೇ ಅಪಹರಣಕಾರರಿಗೆ ಸಿಕ್ಕಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಇಬ್ಬರನ್ನು ಕಂಡ ಕುಕಿ ಸಮುದಾಯದವರು ವಾಹನದಲ್ಲಿ ಅಪಹರಣ ಮಾಡಿದ್ದಾರೆ. ಇದಾದ ಬಳಿಕ ಜುಲೈ 8ರಂದು ಬಾಲಕನನ್ನು, ಜುಲೈ 11ರಂದು ಬಾಲಕಿಯನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್‌ 25ರಂದು ಮಣಿಪುರದಲ್ಲಿ ಇಂಟರ್‌ನೆಟ್‌ ಸೌಲಭ್ಯ ಮರುಸ್ಥಾಪಿಸಿದ ಬಳಿಕ ಇಬ್ಬರ ಫೋಟೊಗಳು, ಅವರ ಕುರಿತ ಕತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಮತ್ತೊಂದೆಡೆ, ಪೊಲೀಸರು ಪ್ರಾಥಮಿಕ ವರದಿಯನ್ನು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐಗೆ ನೀಡಿದೆ.

Exit mobile version