| ಮಯೂರಲಕ್ಷ್ಮಿ
1857ರಲ್ಲಿ ಬ್ರಿಟಿಷರ ವಿರುದ್ಧ ಭಾರತದಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಂತ ಸೇನೆ ಕಟ್ಟಿ ಸಶಸ್ತ್ರ ಯುದ್ಧದಿಂದ ಬ್ರಿಟಿಷರನ್ನೆದುರಿಸಿದ ವೀರ ವಾಸುದೇವ್ ಬಲವಂತ ಫಡ್ಕೆ. ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಯ ಶಿರ್ಧಾನ್ ಗ್ರಾಮದಲ್ಲಿ ನವೆಂಬರ್ 4, 1845ರಲ್ಲಿ ಚಿತ್ಪಾವನ ಕುಟುಂಬದ ಅತ್ಯಂತ ಶ್ರೀಮಂತ ಮನೆತನದಲ್ಲಿ ಜನಿಸಿದ ವಾಸುದೇವ ಬಲವಂತ ಫಡ್ಕೆ ಸಿಂಹದಂತಹ ಸಾಹಸಿ.
ಅವರ ಪೂರ್ವಜರು ಪೇಶ್ವಾ ಆಡಳಿತದಲ್ಲಿ “ಖಿಲ್ಲೇದಾರ” ವೃತ್ತಿಯಲ್ಲಿದ್ದವರು. ಪ್ರಾರಂಭಿಕ ಶಿಕ್ಷಣವನ್ನು ಮರಾಠೀ ಶಾಲೆಯಲ್ಲಿ ಮುಗಿಸಿದ ವಾಸುದೇವ್ ಆಂಗ್ಲ ಶಿಕ್ಷಣವನ್ನು ಇಷ್ಟಪಡದೆ ಬಾಂಬೆಗೆ ಹೋಗಿ ನಾನಾ ಶಂಕರ ಅವರ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದರು. ಮುಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದರು. ಛತ್ರಪತಿ ಶಿವಾಜಿ ಪರಾಕ್ರಮ ಗಾಥೆಗಳಿಂದ ಪ್ರೇರಿತನಾಗಿ ಕುದುರೆ ಸವಾರಿ, ಕತ್ತಿವರಸೆ ಮತ್ತು ಶೂಟಿಂಗ್‍ಗಳನ್ನೂ ಕಲಿತರು. ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸುವ ಅದಮ್ಯ ಬಯಕೆಯೊಡನೆ ಕ್ರಾಂತಿಕಾರಿ ವಿಚಾರಗಳು ಅವರಲ್ಲಿ ಮನೆಮಾಡಿತು.
ಅವರಿಗೆ ಸಣ್ಣ ವಯಸ್ಸಿನಲ್ಲಿ ವಿವಾಹವಾಯಿತು. ದುರದೃಷ್ಟವಶಾತ್ ಅವರ ಪತ್ನಿ ಅಕಾಲ ಮೃತ್ಯುವಿಗೀಡಾದ ನಂತರ ಮತ್ತೊಂದು ವಿವಾಹವಾದ ನಂತರ ಅವರ ಪರಿವಾರದ ಜವಾಬ್ದಾರಿ ಹೆಚ್ಚಾಯಿತು. ಮುಂದೆ ಬ್ರಿಟಿಷ್ ಸರಕಾರದಲ್ಲಿ ಮಿಲಿಟರಿಯ ಆರ್ಥಿಕ ವಿಭಾಗಕ್ಕೆ ಸೇರ್ಪಡೆಯಾದರು. ಅಲ್ಲಿ ಜಸ್ಟೀಸ್ ರಾನಡೇಯರ ಮಾರ್ಗದರ್ಶನದಲ್ಲಿ ಅವರ ಕ್ರಾಂತಿಕಾರಿ ನಿಲುವುಗಳು ಇನ್ನಷ್ಟು ಬಲವಾದವು. ಸರ್ಕಾರಿ ಕೆಲಸದಲ್ಲಿದ್ದ ಭಾರತೀಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದ ಬ್ರಿಟಿಷರ ಬಗ್ಗೆ ಆಕ್ರೋಶ ಮೂಡಿತು. ತಮ್ಮ ತಾಯಿ ನಿಧನರಾದಾಗ ಅಂತಿಮ ದರ್ಶನಕ್ಕೆ ಅವರಿಗೆ ಸರಕಾರ ರಜೆ ನೀಡಲಿಲ್ಲ. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೆ ಫಡ್ಕೆ ಮನಸ್ಸಲ್ಲಿ ಹತಾಶೆಯೊಡನೆ ಬ್ರಿಟಿಷರ ವಿರುದ್ಧ ಆಕ್ರೋಶ ಭುಗಿಲೆದ್ದಿತು.
ಅಂದಿನ ದಿನಗಳಲ್ಲಿ ಬ್ರಿಟಿಷ್ ಸರಕಾರದ ಕಲೆಕ್ಟರ್‌ಗಳು ಮತ್ತು ಅಧಿಕಾರಿಗಳು ರೈತರ ಮೇಲೆ ಮನಬಂದಂತೆ ಸುಂಕ ಹೇರಿ ದೌರ್ಜನ್ಯವೆಸಗುತ್ತಿದ್ದರು. ಈ ಎಲ್ಲಾ ಘಟನೆಗಳಿಂದ ಸಿಡಿದೆದ್ದ ಅವರು ಕೆಲಸಕ್ಕೆ ರಾಜೀನಾಮೆ ನೀಡಿದರು. ಮುಂದೆ ರಾಮೋಶಿ ಜನರ ಜೊತೆಗೂಡಿದರು. ನೂರಾರು ವರ್ಷಗಳಿಂದ ಮರಾಠಾ ದೊರೆಗಳ ಅರಮನೆ ಮತ್ತು ಕೋಟೆ ಕೊತ್ತಲಗಳನ್ನು ರಕ್ಷಿಸುತ್ತಿದ್ದ ರಾಮೋಶೀ ಜನರು ಬ್ರಿಟಿಷರಿಂದ ಪೀಡಿತರಾಗಿದ್ದರು. ತಮ್ಮದೆಲ್ಲವನ್ನೂ ಕಳೆದುಕೊಂಡು ಗುಲಾಮಗಿರಿಯಲ್ಲಿ ನರಳುತ್ತಿದ್ದ ಅವರಿಗೆ ಭರವಸೆಯಾದವರು ವಾಸುದೇವ್. ವಾಸುದೇವ್ ಫಡ್ಕೆಯನ್ನು ತಮ್ಮ “ಮಹಾರಾಜ” ಎಂದು ಸಾರಿದರು.
ಸೇನೆಯ ಕಾರ್ಯಗಳಿಗೆ ಹಣದ ಅವಶ್ಯಕತೆಯಿತ್ತು, ರಾಮೋಶೀ ಜನರಲ್ಲಿ ಶೌರ್ಯಬಲವಿತ್ತು ಆದರೆ ಹಣವಿರಲಿಲ್ಲ. ಶಸ್ತ್ರ ಖರೀದಿಯೊಂದಿಗೆ ಅನ್ಯ ವೆಚ್ಚಗಳಿಗಾಗಿ ಐದು ಸಾವಿರ ರೂಪಾಯಿಗಳ ಅವಶ್ಯಕತೆಯಿತ್ತು. ಬಡವರ ಹಣ ದೋಚುತ್ತಿದ್ದ ಶ್ರೀಮಂತರಿಂದ ಹಣ ಲೂಟಿಮಾಡಿ ಸೇನೆಯನ್ನು ಬಲಪಡಿಸುವುದು ಮುಂದಿನ ಯೋಜನೆಯಾಗಿತ್ತು. ಅದರೊಂದಿಗೆ ಬ್ರಿಟಿಷರ ಖಜಾನೆಯ ಹಣ ಮತ್ತು ಐಶ್ವರ್ಯದ ಲೂಟಿ. ಮೊದಲು ಧಮರಿ ಎನ್ನುವ ಊರಿನ ಖಜಾನೆ ವಶವಾದ ನಂತರ ವಲ್ಹೇ, ಪಲಬ್ಸೇ ಮುಂತಾದ ಅನೇಕ ಊರುಗಳ ಖಜಾನೆಗಳ ಮೇಲೆ ದಾಳಿ ಮಾಡಿದರು.
ಬ್ರಿಟಿಷರ ಪಾಲಿಗೆ ಕಂಟಕವಾಗಿದ್ದ ಫಡ್ಕೆಯ ಸೆರೆಹಿಡಿಯಲು ಅವರು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಜನರ ಒಲವನ್ನು ಪಡೆದಿದ್ದ ಫಡ್ಕೆಯನ್ನು ಕುರಿತು ಯಾರೂ ಸುಳಿವು ಕೊಡಲಿಲ್ಲ. ಸುಳಿವು ನೀಡಿದವರಿಗೆ ಸೂಕ್ತ ಬಹುಮಾನವನ್ನೂ ಘೋಷಿಸಿ ಅವನ ಚಿತ್ರದೊಂದಿಗೆ ಭಿತ್ತಿಚಿತ್ರವನ್ನು ಅಂಟಿಸಿದರು. ಇದಕ್ಕೆ ಉತ್ತರವಾಗಿ ಫಡ್ಕೆಯ ಮಿತ್ರರು ಅಹೋರಾತ್ರಿ ರಸ್ತೆಗಳಲ್ಲಿ ಗೋಡೆಗಳ ಮೇಲೆ ಮತ್ತೊಂದು ಸೂಚನೆಯ ಭಿತ್ತಿಚಿತ್ರ ಅಂಟಿಸಿದರು. ಬಾಂಬೇ ಗವರ್ನರ್ ಸರ್ ರಿಚರ್ಡ್ ಟೆಂಪಲ್‍ನನ್ನು ಸೆರೆಹಿಡಿದು ಅಥವಾ ಕೊಂದರೆ ಬ್ರಿಟಿಷರು ಘೋಷಿಸಿದ ಹಣಕ್ಕೆ ಒಂದೂವರೆ ಪಟ್ಟು ಹೆಚ್ಚು ಬಹುಮಾನ ನೀಡುವುದಾಗಿ ಆ ಸೂಚನೆಯಲ್ಲಿತ್ತು.
ಫಡ್ಕೆಯ ಸೇನೆ ಪುಣೆಯ ಸರ್ಕಾರೀ ಕಚೇರಿಯನ್ನು ಸುಟ್ಟು ಧ್ವಂಸ ಮಾಡಿತು. ಬ್ರಿಟಿಷರು ಫಡ್ಕೆಯನ್ನು ಹಿಡಿಯಲು ತೀವ್ರ ಕಾರ್ಯಾಚರಣೆ ಆರಂಭಿಸಿದರು. ಕ್ರಮೇಣ ಫಡ್ಕೆ ಕಟ್ಟಿದ್ದ ಸೇನೆಯಲ್ಲಿ ಹಣದ ಅಭಾವ ಹೆಚ್ಚಾಯಿತು. ಜೊತೆಗೆ ಪೋಲೀಸರ ಸೆರೆಯಾಗುವ ಆತಂಕ. ಪೋಲಿಸರು ತಮ್ಮನ್ನು ಹಿಂಬಾಲಿಸುತ್ತಿದ್ದ ಸುಳಿವು ಸಿಕ್ಕ ಫಡ್ಕೆ ತಪ್ಪಿಸಿಕೊಂಡು ಗಂಗಾಪುರಕ್ಕೆ ಹೋದರು. ಅಲ್ಲಿಂದ ಮುಂದುವರಿದು ಸ್ನೇಹಿತರಿಂದ ಬೇರೆಯಾಗಿ ಹಗಲೂ-ರಾತ್ರಿ ನಿದ್ರಿಸದೆ ಕಾಡು-ಮೇಡುಗಳನ್ನು ಅಲೆದರು. ನಿದ್ರಾಹಾರವಿಲ್ಲದೆ ಜರ್ಝರಿತರಾದರು. ಕಾಡಿನ ಹಣ್ಣುಗಳು, ನದಿ ನೀರೇ ಆಹಾರವಾಯಿತು.
ಇದನ್ನೂ ಓದಿ| Bhagat Singh Birthday | ಲೇಖನ | ಯುವಕರಿಗೆ ಸದಾ ಸ್ಫೂರ್ತಿ ಕ್ರಾಂತಿಕಾರಿ ಭಗತ್ ಸಿಂಗ್
1870, ಜುಲೈ 20ರ ದೇವಾರ್ ಎನ್ನುವ ಊರನ್ನು ತಲುಪಿದಾಗ ವಿಷಮ ಜ್ವರದಿಂದ ನಿತ್ರಾಣರಾದರು. ಅವರ ಸುಳಿವು ಸಿಕ್ಕ ಬ್ರಿಟಿಷ್ ಅಧಿಕಾರಿ ಡೇನಿಯಲ್ ಅವನ ಮೇಲೆರಗಿ ಸೆರೆಹಿಡಿದ. ಧೈರ್ಯವಿದ್ದಲ್ಲಿ ತಮ್ಮ ಬೇಡಿಗಳನ್ನು ತೆಗೆದು ಹೋರಾಡುವಂತೆ ಫಡ್ಕೆ ಸವಾಲೆಸೆದರು. ಅಲ್ಲಿಂದ ಕರೆದೊಯ್ದ ಅವರನ್ನು ಪುಣೆಯ ಸೆರೆಯಲ್ಲಿಟ್ಟರು. ಮುಂದೆ ಪುಣೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯ್ತು. ಸರಕಾರೀ ಖಜಾನೆ ದರೋಡೆ ಮತ್ತು ಶ್ರೀಮಂತರ ಮೇಲೆ ದಾಳಿಗಳ ಆಪಾದನೆ ಹೊರಿಸಿದರು. ಫಡ್ಕೆ ಪರ ವಾದ ಮಾಡಲು ಗಣೇಶ್ ವಾಸುದೇವ ಜೋಶಿ ಮುಂದೆ ಬಂದರು. ದುರದೃಷ್ಟವಶಾತ್ ಅವರ ವಾದ ಫಲಿಸಲಿಲ್ಲ. ಸ್ವತ: ಫಡ್ಕೆ ತಮ್ಮ ದೇಶಹಿತ ಕಾರ್ಯ ಸಮರ್ಥಿಸಿ ವಾದ ಮಂಡಿಸಿದರು.
ಆದರೆ ಅದು ಫಲ ಕಾಣಲಿಲ್ಲ. ಅವರಿಗೆ ಆಜೀವ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಭಾರತದಿಂದ ಅವನನ್ನು “ಆಡೆನ್” ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಸೆರೆಮನೆಯಲ್ಲಿ ಡೈರಿಯಲ್ಲಿ ಫಡ್ಕೆ ತಮ್ಮ ಸಾಹಸ ಕಥನಗಳನ್ನು ದಾಖಲಿಸಿದರು. ಅಕ್ಟೋಬರ್ 31, 1880ರಂದು ಆಡೆನ್ ಜೈಲಿನ ಎತ್ತರದ ಗೋಡೆ ಹಾರಿ ತಪ್ಪಿಸಿಕೊಂಡರು. ಆದರೆ ಪರದೇಶವಾದ್ದರಿಂದ ಅಲ್ಪ ಸಮಯದಲ್ಲಿಯೇ ಮತ್ತೆ ಬ್ರಿಟಿಷರ ಸೆರೆಯಾಗಬೇಕಾಯ್ತು. ಮತ್ತೆ ಸೆರೆಮನೆಯ ವಾಸ, ನ್ಯಾಯಾಲಯದಲ್ಲಿ ವಿಚಾರಣೆ.
ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದಾಗ ಉಪವಾಸ ಸತ್ಯಾಗ್ರಹ ಮಾಡಿ ಪ್ರತಿಭಟಿಸಿದರು. 1883, ಫೆಬ್ರವರಿ 17ರಂದು ಸೆರೆಮನೆಯಲ್ಲಿ ಚಿತ್ರಹಿಂಸೆ ಮತ್ತು ತೀವ್ರ ಅನಾರೋಗ್ಯದಿಂದ ವಾಸುದೇವ್ ಫಡ್ಕೆ ಇಹಲೋಕ ತ್ಯಜಿಸಿದರು. ಸಾವಿನ ಸುದ್ದಿ ಮಿಂಚಿನಂತೆ ಹರಡಿತು. ಪರದೇಶದಲ್ಲಿ ತಮ್ಮ ನೆಚ್ಚಿನ ನಾಯಕ ಅಸ್ತಂಗತರಾದದ್ದನ್ನು ತಿಳಿದು ಭಾರತೀಯರು ಕಣ್ಣೀರಿಟ್ಟರು.
ಇದನ್ನೂ ಓದಿ | ಜನ್ಮದಿನ ಸ್ಮರಣೆ | ಬಲಿದಾನಿಯಾದ ಕ್ರಾಂತಿಕಾರಿ ಕವಿ ಅಷ್ಫಾಕುಲ್ಲಾ ಖಾನ್