Site icon Vistara News

Kantilal Bhuria: ಒಬ್ಬನಿಗೆ ಇಬ್ಬರು ಹೆಂಡತಿಯರು ಇದ್ದರೆ ಕಾಂಗ್ರೆಸ್‌ನಿಂದ 2 ಲಕ್ಷ ರೂ. ಎಂದ ಕೈ ನಾಯಕ; ಬಿಜೆಪಿ ಟೀಕೆ

Kantilal Bhuria

Men With 2 Wives Will Get Rs 2 Lakh: Congress Leader Kantilal Bhuria's Bizarre Promise Sparks Row

ಭೋಪಾಲ್‌: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಹಣಕಾಸು ನೆರವು ಸೇರಿ ಪಂಚ ನ್ಯಾಯಗಳ ತತ್ವದಲ್ಲಿ ಕಾಂಗ್ರೆಸ್‌ ಪ್ರಾಣಾಳಿಕೆ ಬಿಡುಗಡೆ ಮಾಡಿದೆ. ಒಂದೊಂದು ನ್ಯಾಯ ತತ್ವವೂ ಐದೈದು ಭರವಸೆ ಹೊಂದಿದೆ. ಅಲ್ಲಿಗೆ ಕಾಂಗ್ರೆಸ್‌ 25 ಭರವಸೆಗಳನ್ನು ನೀಡಿದಂತಾಗಿದೆ. ಇನ್ನು, ಇದೇ ಪ್ರಣಾಳಿಕೆಯ ಭರವಸೆಯನ್ನು ಇಟ್ಟುಕೊಂಡು ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕ ಕಾಂತಿಲಾಲ್‌ ಭುರಿಯಾ (Kantilal Bhuria) ನೀಡಿರುವ ಹೇಳಿಕೆಯು ಟೀಕೆಗೆ ಕಾರಣವಾಗಿದೆ. “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರು ಇದ್ದರೆ, ಆ ಕುಟುಂಬಕ್ಕೆ 2 ಲಕ್ಷ ರೂ. ನೀಡಲಾಗುವುದು” ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಕಾಂತಿಲಾಲ್‌ ಭುರಿಯಾ, “ದೇಶದ ಮಹಿಳೆಯರಿಗಾಗಿ ಕಾಂಗ್ರೆಸ್‌ ಭರ್ಜರಿ ಘೋಷಣೆ ಮಾಡಿದೆ. ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಒಬ್ಬ ಮಹಿಳೆಯು ವರ್ಷಕ್ಕೆ 1 ಲಕ್ಷ ರೂ. ಪಡೆಯಲಿದ್ದಾರೆ. ನೇರವಾಗಿ ಅವರ ಖಾತೆಗೆ ಹಣ ಜಮೆಯಾಗಲಿದೆ. ಇನ್ನು, ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರು ಇದ್ದರೆ, ಅವರಿಗೆ ಎರಡು ಲಕ್ಷ ರೂ. ಸಿಗಲಿದೆ” ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿಯು ತಿರುಗೇಟು ನೀಡಿದೆ.

ಕಾಂತಿಲಾಲ್‌ ಭುರಿಯಾ ಹೇಳಿಕೆಗೆ ಬಿಜೆಪಿ ವಕ್ತಾರ ನರೇಂದ್ರ ಸಲುಜಾ ತಿರುಗೇಟು ನೀಡಿದ್ದಾರೆ. “ಇಂತಹ ಹೇಳಿಕೆ ನೀಡಿರುವ ಕಾಂತಿಲಾಲ್‌ ಭುರಿಯಾ ವಿರುದ್ಧ ಚುನಾವಣೆ ಆಯೋಗವು ಕ್ರಮ ತೆಗೆದುಕೊಳ್ಳಬೇಕು. ದೇಶದ ನಾಯಕ, ಎರಡೆರಡು ಮದುವೆ, ಬೆತ್ತಲೆ ಸೇರಿ ಹಲವು ವಿಷಯಗಳ ಕುರಿತು ಇವರು ನೀಡಿದ ಹೇಳಿಕೆಗಳು ಆಕ್ಷೇಪಾರ್ಹವಾಗಿವೆ” ಎಂದು ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾಂತಿಲಾಲ್‌ ಭುರಿಯಾ ಅವರು ಮಧ್ಯಪ್ರದೇಶದ ರತ್ಲಾಮ್‌ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಇವರು ಮಧ್ಯಪ್ರದೇಶ ಅರಣ್ಯ ಸಚಿವ ನಾಗರ್‌ ಸಿಂಗ್‌ ಚೌಹಾಣ್‌ ಅವರ ಪತ್ನಿ, ಬಿಜೆಪಿಯ ಅನಿತಾ ಚೌಹಾಣ್‌ ಅವರನ್ನು ಎದುರಿಸುತ್ತಿದ್ದಾರೆ. ಇವರು ಭಾಷಣ ಮಾಡುವ ವೇಳೆ ವೇದಿಕೆ ಮೇಲೆ ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌, ರಾಜ್ಯ ಘಟಕದ ಅಧ್ಯಕ್ಷ ಜೀತು ಪಟ್ವಾರಿ ಸೇರಿ ಹಲವರು ಇದ್ದರು.

ಪಂಚ ನ್ಯಾಯ ತತ್ವದಲ್ಲಿ ಯುವಕರಿಗಾಗಿ ಯುವ ನ್ಯಾಯ, ಮಹಿಳೆಯರಿಗೆ ನಾರಿ ನ್ಯಾಯ, ರೈತರಿಗಾಗಿ ಕಿಸಾನ್‌ ನ್ಯಾಯ, ಕಾರ್ಮಿಕರಿಗಾಗಿ ಶ್ರಮಿಕ್‌ ನ್ಯಾಯ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯ ನೀಡುವ ಹಿಸ್ಸೇದಾರಿ ನ್ಯಾಯ ಎಂಬ ಐದು ಘೋಷಣೆಗಳನ್ನು ಕಾಂಗ್ರೆಸ್‌ ಮಾಡಿದೆ.

ಇದನ್ನೂ ಓದಿ: Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

Exit mobile version