Site icon Vistara News

2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ; ಏನಿದು ಮಿಯಾಂವ್‌ ಮಿಯಾಂವ್‌ ಡ್ರಗ್ಸ್?

Drugs Seized

'Meow Meow' Drug Worth Rs 2,500 Crore Found In Delhi, Pune Raids: Cops

ನವದೆಹಲಿ: ಮಾದಕವಸ್ತು ನಿಯಂತ್ರಣದ ದಿಸೆಯಲ್ಲಿ ಪೊಲೀಸರು ಹಾಗೂ ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ಅಧಿಕಾರಿಗಳು ದೇಶದಲ್ಲೇ ಬೃಹತ್‌ ಕಾರ್ಯಾಚರಣೆ ಕೈಗೊಂಡಿದ್ದು, ದೆಹಲಿ ಹಾಗೂ ಪುಣೆಯಲ್ಲಿ ಸುಮಾರು 2,500 ಕೋಟಿ ರೂ. ಮೌಲ್ಯದ ಮೆಫೆಡ್ರೋನ್‌ (Mephedrone) (ಮಿಯಾಂವ್‌ ಮಿಯಾಂವ್) ಮಾದಕವಸ್ತುವನ್ನು ಜಪ್ತಿ (Drugs Seized) ಮಾಡಿದ್ದಾರೆ. ಸೋಮವಾರ (ಫೆಬ್ರವರಿ 21) ಸಂಜೆಯೇ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಎರಡು ದಿನಗಳಲ್ಲಿ ಬೃಹತ್‌ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ‌

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕುರುಕುಂಭ ಎಂಐಡಿಸಿಯಲ್ಲಿ ಮಂಗಳವಾರ (ಫೆಬ್ರವರಿ 20) ಪೊಲೀಸರು ಸುಮಾರು 1,400 ಕೋಟಿ ರೂ. ಮೌಲ್ಯದ 700 ಕೆ.ಜಿ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಂಗಳವಾರ ಸಂಜೆಯೇ ದೆಹಲಿಯಲ್ಲಿ ಪುಣೆಯ ಕ್ರೈಂ ಬ್ರಾಂಚ್‌ ಅಧಿಕಾರಿಗಳು 400 ಕೆ.ಜಿ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಹಲವೆಡೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಮಂಗಳವಾರ ಸಂಜೆ ಪೊಲೀಸರು ಪುಣೆಯ ವಿಶ್ರಾಂತ್‌ವಾಡಿಯಲ್ಲಿರುವ ಎರಡು ಉಗ್ರಾಣಗಳ ಮೇಲೆ ದಾಳಿ ನಡೆಸಿ, ಸುಮಾರು 55 ಕೆಜಿ ಮೆಫೆಡ್ರೋನ್‌ಅನ್ನು ವಶಪಡಿಸಿಕೊಂಡಿದ್ದರು. ಇದೇ ವೇಳೆ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬೃಹತ್‌ ಡ್ರಗ್ಸ್‌ ಜಾಲ ಇರುವುದು ಪತ್ತೆಯಾಗಿದೆ. ಕೂಡಲೇ ಅಲರ್ಟ್‌ ಆದ ಪೊಲೀಸರು ದೆಹಲಿ ಹಾಗೂ ಪುಣೆಯ ಹಲವೆಡೆ ತೀವ್ರವಾಗಿ ಶೋಧ ನಡೆಸುವ ಮೂಲಕ ಒಟ್ಟು 2,500 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದು ದೇಶದಲ್ಲೇ ಅಧಿಕಾರಿಗಳು ವಶಪಡಿಸಿಕೊಂಡ ಬೃಹತ್‌ ಮೊತ್ತದ ಡ್ರಗ್ಸ್‌ ಪ್ರಕರಣಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹ್ಯಾಂಡ್‌ ಬ್ಯಾಗ್‌ನಲ್ಲಿ ಚಿನ್ನದ ಪೇಸ್ಟ್‌; ಹೊಟ್ಟೆಯೊಳಗೆ ಮಾತ್ರೆ ರೂಪದಲ್ಲಿತ್ತು 20 ಕೋಟಿ ರೂ. ಮೌಲ್ಯದ ಡ್ರಗ್ಸ್‌!

ಏನಿದು ಮಿಯಾಂವ್‌ ಮಿಯಾಂವ್‌ ಡ್ರಗ್ಸ್?‌

ಮೆಫೆಡ್ರೋನ್‌ ಮಾದಕವಸ್ತುವನ್ನೇ ಮಿಯಾಂವ್‌ ಮಿಯಾಂವ್‌ ಡ್ರಗ್ಸ್‌ ಎಂದು ಕರೆಯಲಾಗುತ್ತದೆ. ಡ್ರಗ್ಸ್‌ ಪೆಡ್ಲರ್‌ಗಳು, ಅಕ್ರಮವಾಗಿ ಸಾಗಿಸುವವರು, ವ್ಯಾಪಾರಿಗಳು ಲೋಕಲ್‌ ಭಾಷೆಯಲ್ಲಿ ಇದನ್ನು ಮಿಯಾಂವ್‌ ಮಿಯಾಂವ್‌ ಎಂದು ಕರೆಯುತ್ತಾರೆ. ದೆಹಲಿ ಹಾಗೂ ಪುಣೆಯಲ್ಲಿ ಇದೇ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ದೇಶಾದ್ಯಂತ ಡ್ರಗ್ಸ್‌ ಪೂರೈಕೆ ಮಾಡುವುದು ಇವರ ಉದ್ದೇಶವಾಗಿತ್ತು. ಈಗಾಗಲೇ, ಮುಂಬೈ, ಥಾಣೆ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳಕ್ಕೂ ಮಿಯಾಂವ್‌ ಮಿಯಾಂವ್‌ ಮಾದಕವಸ್ತುವನ್ನು ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version