Site icon Vistara News

Migrant worker Killed: ಉಗ್ರರ ಗುಂಡಿಗೆ ಕಾಶ್ಮೀರದಲ್ಲಿ ವಲಸೆ ಕಾರ್ಮಿಕ ಬಲಿ, ಮತ್ತೊಬ್ಬನಿಗೆ ಗಾಯ

Migrant worker killed by terrorists in Srinagar, Jammu and Kashmir

ಶ್ರೀನಗರ: ವಲಸೆ ಕಾರ್ಮಿಕನನ್ನು ಭಯೋತ್ಪಾದಕರು (Terrorists) ಗುಂಡಿಟ್ಟು ಕೊಂದ (Migrant worker Killed) ಘಟನೆ ಬುಧವಾರ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ (Srinagar) ನಡೆದಿದ್ದು, ಮತ್ತೊಬ್ಬ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದಾನೆ. ಮೃತ ವಲಸೆ ಕಾರ್ಮಿಕನನ್ನು ಪಂಜಾಬ್‌ನ ಅಮೃತಪಾಲ್ ಸಿಂಗ್ (Worker from Punjab) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ರೋಹಿತ್ ಎಂದು ಗುರುತಿಸಲಾಗಿದೆ.

ಶ್ರೀನಗರದ ಶಹೀದ್ ಗುಂಜ್‌ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಈ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಗಾಯಗೊಂಡ ವ್ಯಕ್ತಿಯನ್ನು ಸ್ಥಳಾಂತರಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಕೇವಲ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಉಗ್ರರ ದಾಳಿ ಇದಾಗಿದೆ. ಇನ್ಸ್‌ಪೆಕ್ಟರ್ ಮಸ್ರೂರ್ ಅಹ್ಮದ್ ವಾನಿ ಅವರು ಈದ್ಗಾ ಪ್ರದೇಶದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಗಿತ್ತು.

ಈ ಹಿಂದೆಯೂ ಕೇಂದ್ರಾಡಳಿತ ಪ್ರದೇಶದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲವಾರು ದಾಳಿಗಳು ನಡೆದಿದ್ದವು. ಜಮ್ಮು ಮತ್ತು ಕಾಶ್ಮೀರವು ಇಂತಹ ದಾಳಿಗಳಿಂದ ಜರ್ಜರಿತವಾಗಿದೆ. 2019ರ ಅಕ್ಟೋಬರ್‌ನಿಂದ ವಲಸೆ ಕಾರ್ಮಿಕರು ಆಗಾಗ್ಗೆ ಈ ಪ್ರದೇಶದಲ್ಲಿ ಭಯೋತ್ಪಾದಕರ ದಾಳಿಗೆ ಗುರಿಯಾಗುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಒಂದು ತಿಂಗಳ ನಂತರ ಶ್ರೀನಗರದಲ್ಲಿ ಈ ದಾಳಿ ನಡೆದಿದೆ. ಸೇನಾ ವಾಹನ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರಿಗೆ ಸೈನಿಕರು ಗುಂಡಿನ ದಾಳಿ ನಡೆಸಿದ್ದರು. ಆರಂಭಿಕ ಗುಂಡಿನ ಚಕಮಕಿಯ ನಂತರ ಭಯೋತ್ಪಾದಕರು ಪರಾರಿಯಾಗಿರಬಹುದು ಎಂದು ವರದಿಗಳು ಸೂಚಿಸಿದ್ದವು. ಈ ಪ್ರದೇಶದಲ್ಲಿ ನಿರಂತರವಾಗಿ ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇವೆ.

ಈ ಸುದ್ದಿಯನ್ನೂ ಓದಿ: ಶೋಪಿಯಾನ್​ನಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದ ಉಗ್ರರಲ್ಲಿ ಇಬ್ಬರು ಅರೆಸ್ಟ್​, ಓರ್ವ ಹತ್ಯೆ

Exit mobile version