ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ನಾಗರಿಕನನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಬಿಹಾರ ಮೂಲದ ವಲಸೆ ಕಾರ್ಮಿಕ (Migrant Worker)ನನ್ನು ಬಂಡಿಪೋರಾ ಜಿಲ್ಲೆಯ ಸೋದನಾರ ಸುಂಬಲ್ ಎಂಬಲ್ಲಿ ಕೊಂದಿದ್ದಾರೆ. ಗುರುವಾರ ಮಧ್ಯರಾತ್ರಿ ಈ ಕಾರ್ಮಿಕನಿಗೆ ಉಗ್ರರು ಗುಂಡು ಹೊಡೆದಿದ್ದು, ಆತ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ. ಆತನನ್ನು ಆಸ್ಪತ್ರೆಗೆ ದಾಖಿಸಿದರೂ ಬದುಕುಳಿಯಲಿಲ್ಲ ಎಂದು ಕಾಶ್ಮೀರಿ ಪೊಲೀಸರು ತಿಳಿಸಿದ್ದಾರೆ. ಮೃತ ಕಾರ್ಮಿಕನನ್ನು ಮೊಹಮ್ಮದ್ ಅಮ್ರೇಜ್ ಎಂದು ಗುರುತಿಸಲಾಗಿದ್ದು, ಮೂಲತಃ ಬಿಹಾರದ ಮಾದೇಪುರಾದ ನಿವಾಸಿ.
ಮೃತ ಅಮ್ರೇಜ್ ತನ್ನ ಸೋದರನೊಂದಿಗೆ ಕಾಶ್ಮೀರದಲ್ಲಿ ನೆಲೆಸಿದ್ದ. ಅಮ್ರೇಜ್ ಹತ್ಯೆಯಾದ ರಾತ್ರಿ ಏನಾಯಿತು ಎಂದು ಅವರ ಸೋದರ ಮಾಹಿತಿ ನೀಡಿದ್ದಾರೆ. ‘ಮಧ್ಯರಾತ್ರಿ 12.20ರ ಹೊತ್ತಿಗೆ ಅಮ್ರೇಜ್ ನನ್ನನ್ನು ಎಬ್ಬಿಸಿ, ಫೈರಿಂಗ್ ಶುರುವಾಗಿದೆ, ಶಬ್ದ ಕೇಳುತ್ತಿದೆ ಎಂದು ಹೇಳಿದ. ಅಷ್ಟಾಗಿ ಕೆಲವು ಹೊತ್ತಲ್ಲಿ ಅವನು ಎಲ್ಲಿಯೂ ಕಾಣಲಿಲ್ಲ. ಅವನು ಶೌಚಾಲಯಕ್ಕೆ ಹೋಗಿರಬೇಕು ಎಂದು ನಾವೆಲ್ಲ ಅಂದುಕೊಂಡೆವು. ತುಂಬ ಹೊತ್ತಾದರೂ ಬಾರದೆ ಇದ್ದಾಗ ನಾವು ಹುಡುಕುತ್ತ ಹೋದೆವು. ಹೊರಗೆ ಹೋಗಿ ನೋಡಿದರೆ ಅಲ್ಲಿ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ, ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾನೆ.
ಜಮ್ಮು ಮತ್ತು ಕಾಶ್ಮೀರ ಕಣಿವೆಯ ರಾಜೌರಿಯ ಭೂಸೇನಾ ನೆಲೆ ಬಳಿ ಆಗಸ್ಟ್ 11ರಂದ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದರು. ಅದರಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದಾರೆ. ಹಾಗೇ, ಇಬ್ಬರು ಉಗ್ರರನ್ನು ಭದ್ರತಾ ಸಿಬ್ಬಂದಿ ಕೊಂದಿದ್ದಾರೆ. ರಾಜೌರಿ ಮುಂತಾದ ಪ್ರದೇಶಗಳು ಕಳೆದ ಕೆಲ ವರ್ಷಗಳಲ್ಲಿ ಭಯೋತ್ಪಾದನೆಯಿಂದ ಬಹುತೇಕ ಮುಕ್ತವಾಗಿದ್ದವು. ಆದರೆ ಕಳೆದ ಆರು ತಿಂಗಳುಗಳಿಂದ ಜಮ್ಮುವಿನಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿವೆ. ಲಷ್ಕರೆ ತಯ್ಬಾ ಭಯೋತ್ಪಾದಕ ಗುಂಪು ಈ ದಾಳಿಯ ಹಿಂದೆ ಇದೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: Terror attack: ಕಾಬೂಲ್‌ನ ಗುರುದ್ವಾರದ ಮೇಲೆ ಉಗ್ರ ದಾಳಿ, 25ಕ್ಕೂ ಅಧಿಕ ಸಾವು?