Site icon Vistara News

Milind Deora: ಕಾಂಗ್ರೆಸ್‌‌ಗೆ ಮಿಲಿಂದ್ ದಿಯೋರಾ ಗುಡ್‌ಬೈ, ಶಿವಸೇನೆಯಿಂದ ಸ್ಪರ್ಧೆ?

Shinde Shiv Sena fielded Milind Deora for the Rajya Sabha elections

ಮುಂಬೈ: ಅತ್ತ ರಾಹುಲ್ ಗಾಂಧಿ (Rahul Gandhi) ಅವರು ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸಿದ್ಧವಾಗುತ್ತಿದ್ದರೆ ಇತ್ತ ಮುಂಬೈನ ಪ್ರಮುಖ ನಾಯಕ ಎನಿಸಿಕೊಂಡಿರುವ ಮಿಲಿಂದ್ ದಿಯೋರಾ (Milind Deora) ಅವರು ಕಾಂಗ್ರೆಸ್ ಪಕ್ಷಕ್ಕೆ (Congress Party) ರಾಜೀನಾಮೆ ನೀಡಿ, ಸಿಎಂ ಏಕನಾಥ ಶಿಂಧೆ (CM Eknath Shinde) ನೇತೃತ್ವದ ಶಿವಸೇನೆ ಸೇರುತ್ತಿದ್ದಾರೆ. ಮಿಲಿಂದ್ ಅವರ ರಾಜೀನಾಮೆಯೊಂದಿಗೆ ಮಹಾರಾಷ್ಟ್ರ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ಬಿದ್ದಿದೆ(Quits Congress). ಮಿಲಿಂದ್ ಅವರು ರಾಜೀನಾಮೆ ನೀಡಲಿದ್ದಾರೆಂದು ವದಂತಿ ಹರಡಿತ್ತು. ಅವರು ಮೊದಲಿಗೆ ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ, ಈಗ ಎಕ್ಸ್‌ ವೇದಿಕೆಯಲ್ಲಿ ತಮ್ಮ ರಾಜೀನಾಮೆಯನ್ನು ಖಚಿತಪಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಮಿಲಿಂದ್ ದಿಯೋರಾ ಅವರು ರಾಹುಲ್ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಇದರೊಂದಿಗೆ ಕಾಂಗ್ರೆಸ್‌ ಪಕ್ಷದ ಜತೆಗಿನ ನಮ್ಮ 55 ವರ್ಷಗಳ ಸಂಬಂಧವನ್ನು ಅತ್ಯಗೊಳಿಸುತ್ತಿದ್ದೇವೆ. ಹಲವು ವರ್ಷಗಳಿಂದ ಬೆಂಬಲಿಸುತ್ತಾ ಬಂದ ಪಕ್ಷದ ಎಲ್ಲ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಮಿಲಿಂದ್ ದಿಯೋರಾ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಮುರಳಿ ದಿಯೋರಾ ಅವರ ಪುತ್ರರಾಗಿರುವ ಮಿಲಿಂದ್ ಅವರು ಮುಂಬೈ ದಕ್ಷಿಣ ಲೋಕಸಭ ಕ್ಷೇತ್ರವನ್ನು 2004 ಮತ್ತು 2009ರಲ್ಲಿ ಪ್ರತಿನಿಧಿಸಿದ್ದರು. ಆದರೆ, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಶಿವಸೇನೆಯ ಅರವಿಂದ್ ಸಾವಂತ್ ವಿರುದ್ಧ ಸೋಲು ಅನುಭವಿಸಿದ್ದರು.

ಮುಂಬೈ ದಕ್ಷಿಣ ಕ್ಷೇತ್ರವನ್ನು ಉದ್ಧವ್ ಠಾಕ್ರೆ ಬಣ ಗೆದ್ದಿರುವ ಬಗ್ಗೆ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ವಿರೋಧ ಪಕ್ಷದ ಮೈತ್ರಿಕೂಟದ ಒಂದು ಭಾಗವಾಗಿದೆ. ಕಳೆದ ಭಾನುವಾರ ವಿಡಿಯೋವೊಂದನ್ನು ಷೇರ್ ಮಾಡಿದ್ದ ಮಿಲಂದ್ ಅವರು, ಮೈತ್ರಿ ಕೂಟದ ಪಕ್ಷವಾಗಿರುವ ಶಿವಸೇನೆ ತನ್ನ ಹೇಳಿಕೆಗಳನ್ನು ನಿಲ್ಲಿಸದಿದ್ದರೆ, ತಮ್ಮ ಪಕ್ಷವೂ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಹೇಳಿದ್ದರು.

ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯನ್ನು ಸೇರ್ಪಡೆಯಾಗುತ್ತಿದ್ದಾರೆ. ತಮ್ಮ ಬೆಂಬಲಿಗರ ಜತೆ ಚರ್ಚೆ ನಡೆಸಿದ ಬಳಿಕ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ. ಮಿಲಿಂದ ಅವರ ತಂದೆ ಮುರಳಿ ದಿಯೋರಾ ಅವರು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾಗಿದ್ದರು. ಮುಂಬೈ ದಕ್ಷಿಣ್ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು. ಅಲ್ಲದೇ ಕೇಂದ್ರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಟೀಮ್‌ನಲ್ಲಿ ಗುರುತಿಸಿಕೊಂಡಿದ್ದ ಮಿಲಿಂದ್ ದಿಯೋರಾ ಅವರು ಬಳಿಕ ಆ ತಂಡದಿಂದ ದೂರವೇ ಇದ್ದರು. ಇದೀಗ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಮುಂಬೈನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Bharat Jodo Nyay Yatra: ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಇಂದು ಮಣಿಪುರದಲ್ಲಿ ಚಾಲನೆ

Exit mobile version