ನವ ದೆಹಲಿ: ಬಿಜೆಪಿಯನ್ನು ನಾಯಿ ಹಾಗೂ ಪ್ರಧಾನಿ ಮೋದಿಯನ್ನು ಪರೋಕ್ಷವಾಗಿ ಇಲಿ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳವಾರ ಸಂಸತ್ತಿನಲ್ಲಿ ಆಯೋಜಿಸಲಾಗಿದ್ದ ಸಿರಿಧಾನ್ಯ (Millet Lunch) ಭೋಜನಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಇತರ ಸಂಸದರು ಹಾಜರಿದ್ದರು.
2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯ ಭಕ್ಷ್ಯಗಳನ್ನು ಬಡಿಸಿದ ರುಚಿಕರವಾದ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಅವರು ಊಟದ ಕೆಲವು ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆ ರ್ಯಾಲಿ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡ ಸತ್ತಿಲ್ಲ ಎಂದು ಟೀಕಿಸಿದ್ದರಲ್ಲದೇ, ಬಿಜೆಪಿಯವರು ಹೊರಗೆ ಸಿಂಹದಂತೆ ವರ್ತಿಸುತ್ತಾರೆ. ಸಂಸತ್ತಿನಲ್ಲಿ ಇಲಿಯಂತೆ ಇರುತ್ತಾರೆಂದು ಪರೋಕ್ಷವಾಗಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದರು. ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ರಾಜ್ಯಸಭೆ ಕಲಾಪದ ವೇಳೆ ಕ್ಷಮೆ ಕೋರುವಂತೆ ಖರ್ಗೆ ಅವರನ್ನು ಒತ್ತಾಯಿಸಿತು. ಆದರೆ, ಸಂಸತ್ತಿನ ಹೊರಗೆ ಆಡಿದ ಮಾತುಗಳಿಗೆ ಕ್ಷಮೆ ಕೋರುವುದಿಲ್ಲ ಎಂದು ಖರ್ಗೆ ಹೇಳಿದ್ದಕ್ಕೆ ಭಾರೀ ಗಲಾಟೆಯೇ ನಡೆದಿತ್ತು.
ಇದನ್ನೂ ಓದಿ | Rajya Sabha | ಬಿಜೆಪಿ ವಿರುದ್ದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಟೀಕೆ, ರಾಜ್ಯಸಭೆಯಲ್ಲಿ ಕೋಲಾಹಲ!