Site icon Vistara News

ಗಣಿ ತಪಾಸಣೆಗೆ ಹೋದ ಮಹಿಳಾ ಅಧಿಕಾರಿಯನ್ನು ಎಳೆದು, ಹಲ್ಲೆ ಮಾಡಿದ ದುರುಳರು, 44 ಜನರ ಬಂಧನ

Mining dept woman officer dragged, attacked by people in Patna; 44 arrested

Mining dept woman officer dragged, attacked by people in Patna; 44 arrested

ಪಟನಾ: ದೇಶದ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸೇನೆಯಿಂದ ಹಿಡಿದು ಐಎಎಸ್‌ವರೆಗೆ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮ್ಕಕಳು ಮುಂಚೂಣಿ ಸ್ಥಾನದಲ್ಲಿದ್ದಾರೆ. ಆದರೆ, ಇವರಿಗೆ ಕೆಲ ಕುತ್ಸಿನ ಮನಸ್ಸಿನ ಪುರುಷರು ಅಡ್ಡಿಪಡಿಸುತ್ತಿದ್ದಾರೆ. ಹೆಣ್ಣುಮಕ್ಕಳು ಎಂಬ ತಾತ್ಸಾರದಿಂದಾಗಿ ನಿರ್ಲಕ್ಷ್ಯದ ಜತೆಗೆ ದೌರ್ಜನ್ಯವನ್ನೂ ಎಸಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದ ಪಟಾನದಲ್ಲಿ ಗಣಿಗಾರಿಕೆಯ ತಪಾಸಣೆಗೆ ತೆರಳಿದ್ದ ಮಹಿಳಾ ಅಧಿಕಾರಿಗಳನ್ನು ಪುರುಷರು ಮಣ್ಣಿನಲ್ಲಿ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 44 ಜನರನ್ನು ಬಂಧಿಸಿದ್ದಾರೆ.

ಪಟನಾ ಜಿಲ್ಲೆಯ ಬಿಹ್ತಾ ಪಟ್ಟಣದ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಗಣಿಗಾರಿಕೆ ಇಲಾಖೆಯ ಮಹಿಳಾ ಅಧಿಕಾರಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ದಾಳಿ ಮಾಡಿದ್ದಾರೆ. ಇದೇ ವೇಳೆ ದುಷ್ಕರ್ಮಿಗಳು ಪುರುಷ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೆಯೇ, ಮಹಿಳಾ ಅಧಿಕಾರಿಯನ್ನು ಮಣ್ಣಿನಲ್ಲಿಯೇ ಎಳೆದುಕೊಂಡು ಹೋದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ಗಣಿಗಾರಿಕೆಯಲ್ಲಿ ತೊಡಗಿರುವವರೇ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿದೆ ವಿಡಿಯೊ

ಮಹಿಳಾ ಅಧಿಕಾರಿಯ ಮೇಲೆ ನಡೆದ ದೌರ್ಜನ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಪಟನಾ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ವೈರಲ್‌ ವಿಡಿಯೊ ಪರಿಶೀಲಿಸಿ 44 ಜನರನ್ನು ಬಂಧಿಸಿದ್ದಾರೆ. ಹಾಗೆಯೇ, ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಬಿಹಾರದಲ್ಲಿ ಕಳ್ಳಬಟ್ಟಿ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಮಧ್ಯೆಯೇ ಮರಳಿನ ಮಾಫಿಯಾ ಕೂಡ ತಲೆಯೆತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಯುವತಿಯ ಹತ್ಯೆ

ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳಾದ ಅತೀಕ್‌ ಅಹ್ಮದ್‌ ಹಾಗೂ ಅಶ್ರಫ್‌ ಅಹ್ಮದ್‌ ಹತ್ಯೆ ಬಳಿಕ ಕಾನೂನು ಸುವ್ಯವಸ್ಥೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಜೌಲನ್‌ ಜಿಲ್ಲೆಯಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಯುವತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ರೋಶ್ನಿ ಅಹಿರ್ವಾರ್‌ (21) ಎಂಬ ಯುವತಿಯು ಪರೀಕ್ಷೆ ಮುಗಿಸಿಕೊಂಡು ಸ್ಕೂಟಿಯ ಮೇಲೆ ತೆರಳುವಾಗ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಯುವತಿಯನ್ನು ಹತ್ಯೆಗೈದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dishonour Killing: ಬಿಹಾರದಲ್ಲಿ ಮರ್ಯಾದಾ ಹತ್ಯೆ; 18, 16 ವರ್ಷದ ಪುತ್ರಿಯರನ್ನು ಕೊಂದ ತಂದೆ, ತಾಯಿ!

Exit mobile version