ಮುಂಬೈ: ಮಹಾರಾಷ್ಟ್ರ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಅಪಾಯ ತಂದೊಡ್ಡಿ ಸುಮಾರು 21 ಶಾಸಕರೊಂದಿಗೆ ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್ ಸೇರಿರುವ ಬಂಡಾಯ ಸಚಿವ ಏಕನಾಥ್ ಶಿಂಧೆಯನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕಲಾಗಿದೆ. ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವರೂ ಆಗಿರುವ ಏಕನಾಥ್ ಶಿಂದೆ ಮಹಾ ಸರ್ಕಾರದ ಪಾಲಿಗೆ ಖಳನಾಯಕನಾಗುವ ಮಾದರಿಯ ಬೆಳವಣಿಗೆಗಳು ನಡೆಯುತ್ತಿವೆ. ಜೂ.20ರಂದು ವಿಧಾನಪರಿಷತ್ ಚುನಾವಣೆ ನಡೆದು, ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದ ಬೆನ್ನಲ್ಲೇ ಶಿಂದೆ ತಮ್ಮ ಆಪ್ತರೊಟ್ಟಿಗೆ ರೆಸಾರ್ಟ್ ಹೊಕ್ಕಿದ್ದಾರೆ. ಬಿಜೆಪಿ ಅಧಿಕಾರ ಇರುವ ರಾಜ್ಯಕ್ಕೇ ಹೋಗಿ ಅವರು ರೆಸಾರ್ಟ್ ಹೊಕ್ಕಿದ್ದರಿಂದ ಅವರೆಲ್ಲ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಅನುಮಾನವೂ ಹೆಚ್ಚಾಗಿದೆ.
ದೂರು ಕೊಟ್ಟ ಶಾಸಕನ ಪತ್ನಿ
ಏಕನಾಥ್ ಶಿಂಧೆಯವರೊಂದಿಗೆ ರೆಸಾರ್ಟ್ ಸೇರಿದ ಶಿವಸೇನೆ ಶಾಸಕ ನಿತಿನ್ ದೇಶ್‌ಮುಖ್ ಪತ್ನಿ ಪ್ರಂಜಲಿ ಅವರು ಅಕೋಲಾ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ʼನನ್ನ ಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೂ.19ರಂದು ಸಂಜೆ 7ಗಂಟೆಗೆ ಅವರ ಬಳಿ ಕೊನೇಬಾರಿಗೆ ಮಾತನಾಡಿದ್ದೇನೆ. ನಂತರ ಫೋನ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸ್ವಿಚ್ ಆಫ್ ಬರುತ್ತಿದೆ. ಬಹುಶಃ ಅವರ ಜೀವಕ್ಕೆ ಅಪಾಯ ಇರಬಹುದುʼ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಶಾಸಕ ನಿತಿನ್ ದೇಶ್‌ಮುಖ್ ಅವರು ಬಾಲಾಪುರ್ ವಿಧಾನಸಭೆ ಸಭೆ ಶಾಸಕರಾಗಿದ್ದಾರೆ.
ನಿನ್ನೆ ಸಂಜೆಯಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ. ʼಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೇ ರೀತಿ ಹಿಂದೆ ಮಧ್ಯಪ್ರದೇಶದಲ್ಲಿ ಮಾಡಿತ್ತು. ರಾಜಸ್ಥಾನದಲ್ಲಿ ಒಮ್ಮೆ ಪ್ರಯತ್ನ ಮಾಡಿ ವಿಫಲಗೊಂಡಿತು. ಮಹಾರಾಷ್ಟ್ರದಲ್ಲೂ ಬಿಜೆಪಿಗೆ ಸರ್ಕಾರ ಉರುಳಿಸಲು ಸಾಧ್ಯವಿಲ್ಲ. ನಮ್ಮ ಶಿವಸೇನೆಯಲ್ಲಿ ನಿಷ್ಠರಿದ್ದಾರೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಮೈತ್ರಿ ಸರಕಾರ: ಉರುಳುವುದೇ? ಉಳಿಯುವುದೇ?