Site icon Vistara News

Viral Video: ದೀದಿ ನಾಡಲ್ಲಿ ಮೃತದೇಹಗಳಿಗೂ ಗೌರವ ಇಲ್ಲ; ಮತ್ತೊಬ್ಬ ಹುಡುಗಿಯ ಶವದ ವಿಡಿಯೊ ಶೇರ್​ ಮಾಡಿದ ಬಿಜೆಪಿ ನಾಯಕ

Minor Girl Body Dragged Away By Police In West Bengal

#image_title

ಕೋಲ್ಕತ್ತ: ಪಶ್ಚಿಮ ಬಂಗಾಳದ (West Bengal) ಕಾಳಿಯಾಗಂಜ್​​​ನಲ್ಲಿ ಬುಡಕಟ್ಟು ಜನಾಂಗದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವಾಗಿ, ನಂತರ ಅವಳು ಮೃತಪಟ್ಟಿದ್ದಳು. ಆಕೆಯ ಶವವನ್ನು ಪೊಲೀಸರು ಹಿಡಿದುಕೊಂಡು ರಸ್ತೆ ಮೇಲೆ ಓಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಪೊಲೀಸರು ಹುಡುಗಿಯ ಮೃತದೇಹದ ಕೈ-ಕಾಲುಗಳನ್ನು ಹಿಡಿದುಕೊಂಡು, ಸಂವೇದನಾಶೀಲ ರಹಿತರಾಗಿ ಓಡಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಹುಡುಗಿಯ ಸಾವಿಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳೀಯರೂ ಕೂಡ ತೀವ್ರ ಪ್ರತಿಭಟನೆ ನಡೆಸಿದ್ದರು. ಆ ಬಾಲಕಿಯ ಸಾವಿನ ಬಿಸಿ ಇನ್ನೂ ತಣ್ಣಗಾಗಿಲ್ಲ..ಅದರ ಮಧ್ಯೆಯೇ ಇನ್ನೊಂದು ಇಂಥದ್ದೇ ಘಟನೆ ವರದಿಯಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹವನ್ನು ಬಟ್ಟೆಯೊಂದಲ್ಲಿ ಹಾಕಿಕೊಂಡು, ಅದನ್ನು ನಾಲ್ವರು ಹಿಡಿದು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ.

ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಈ ವಿಡಿಯೊ ಶೇರ್ ಮಾಡಿಕೊಂಡು, ಮಮತಾ ಬ್ಯಾನರ್ಜಿ ಸರ್ಕಾರವನ್ನು ಟೀಕಿಸಿದ್ದಾರೆ. ‘ಕಳೆದವಾರ ಪಶ್ಚಿಮ ಬಂಗಾಳದ ಉತ್ತರ ದಿನಾಜ್​​ಪುರದ ಕಾಳಿಯಾಗಂಜ್​​ನಲ್ಲಿ ಬಾಲಕಿಯೊಬ್ಬಳು ಅತ್ಯಾಚಾರಕ್ಕೀಡಾಗಿ, ಮೃತಪಟ್ಟಿದ್ದಳು. ಅಂದು ಸ್ಥಳೀಯರು ಕೋಪಗೊಂಡು ಪೊಲೀಸರ ವಿರುದ್ಧ ಕಲ್ಲು ತೂರಾಟ ಮಾಡಿದ್ದರು. ಕಾಳಿಯಾಗಂಜ್​​ನ ಪೊಲೀಸ್ ಠಾಣೆಯನ್ನು ಸುಟ್ಟು ಹಾಕಿದ್ದಾರೆ. ಈಗ ಮತ್ತೊಬ್ಬಳು ಬಾಲಕಿಯ ಶವ ಪತ್ತೆಯಾಗಿದೆ. ಈ ಹುಡುಗಿ ಮಾಲ್ಡಾದ ಕಾಳಿಯಾಚಕ್​ನವಳು. ಆಕೆಯ ಮೃತದೇಹವನ್ನು ಎಷ್ಟು ಅಗೌರವಯುತವಾಗಿ ಕೊಂಡೊಯ್ಯುತ್ತಿದ್ದಾರೆ ನೋಡಿ. ಪಶ್ಚಿಮ ಬಂಗಾಳದಲ್ಲಿ ಸತ್ತ ಮೇಲೆ ಕೂಡ ಘನತೆಯಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನಾಚಿಕೆಯಾಗಬೇಕು. ರಾಜ್ಯದ ಆಡಳಿತವನ್ನು ಅವರು ಸರಿಯಾಗಿ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಹೀಗೆ ಯುವತಿಯರ ಜೀವ ಹೋಗುತ್ತಿದೆ. ಪೂರ್ಣ ಜೀವನ ನಡೆಸಬೇಕಾದವರೆಲ್ಲ ಶವವಾಗುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಹಾಗೇ, ಈ ವಿಡಿಯೊವನ್ನು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುಕಾಂತಾ ಮಜುಮ್ದಾರ್​ ಕೂಡ ಶೇರ್ ಮಾಡಿಕೊಂಡಿದ್ದಾರೆ. ಹೀಗೆ ಪುಟ್ಟಪುಟ್ಟ ಹುಡುಗಿಯರು ಶವವಾಗುತ್ತಿರುವುದು, ಕೊಲೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಪೊಲೀಸರು ಸುರಕ್ಷತೆ ನೀಡುವ ಬಗ್ಗೆ ಯೋಚಿಸದೆ, ತಮ್ಮ ಮೇಲಿನ ಆಪಾದನೆಯಿಂದ ಹೇಗೆ ಪಾರಾಗಬೇಕು ಎಂಬ ಬಗ್ಗೆ ಯೋಚಿಸುವುದರಲ್ಲಿಯೇ ಬ್ಯೂಸಿಯಿದ್ದಾರೆ. ಮಮತಾ ಬ್ಯಾರ್ನರ್ಜಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.

ಅಂದಹಾಗೇ, ಈ ಅಪ್ರಾಪ್ತ ವಯಸ್ಸಿನ ಬಾಲಕಿಯ ಶವ ಮಾಲ್ಡಾದಲ್ಲಿರುವ ಹೊಲವೊಂದರಲ್ಲಿ ಪತ್ತೆಯಾಗಿದೆ. ಆಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮಂಗಳವಾರ ಮುಂಜಾನೆ ಶವ ಸಿಕ್ಕಿದೆ. ಅದನ್ನು ಒಂದು ಬಟ್ಟೆಯಲ್ಲಿ ಹಾಕಿಕೊಂಡು ತೆಗೆದುಕೊಂಡು ಹೋಗಲಾಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗದ ನಿರ್ದೇಶಕಿ ಪ್ರಿಯಾಂಕಾ ಕಾನೂಂಗೊ ಕೂಡ ಪೊಲೀಸರನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬುಡಕಟ್ಟು ಬಾಲಕಿ ಮೃತಪಟ್ಟಿದ್ದು ವಿಷದಿಂದ ಎಂದ ಪೋಸ್ಟ್​ಮಾರ್ಟಮ್​ ರಿಪೋರ್ಟ್​; ಅತ್ಯಾಚಾರ ನಡೆದಿತ್ತಾ?

Exit mobile version