Site icon Vistara News

Minority Scholarship Scam: ಅಲ್ಪಸಂಖ್ಯಾತ ಸ್ಕಾಲರ್‌ಶಿಪ್ ಹಗರಣ! ಶೇ.53 ಸಂಸ್ಥೆ ಫೇಕ್, ಇದರಲ್ಲಿ ಕರ್ನಾಟಕದ ಸಂಸ್ಥೆಗಳಿವೆ!

Scam

ನವದೆಹಲಿ: ಅಲ್ಪ ಸಂಖ್ಯಾತ ಶಿಷ್ಯವೇತನ ಹಗರಣರವೊಂದು (minority scholarship scam) ಬಯಲಿಗೆ ಬಂದಿದೆ. ಅಲ್ಪಸಂಖ್ಯಾತ ಸ್ಕಾಲರ್‌ಶಿಪ್ ಪ್ರೋಗ್ರಾಮ್‌ನಡಿ ಸಕ್ರಿಯವಾಗಿರುವ ಸಂಸ್ಥೆಗಳ ಪೈಕಿ ಶೇ.53ರಷ್ಟು ಸಂಸ್ಥೆಗಳು ಫೇಕ್ (Fake Institutions) ಎಂಬುದು ಗೊತ್ತಾಗಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯು (Ministry of Minority Affairs) ನಡೆಸಿದ ಆಂತರಿಕ ತನಿಖೆ ವೇಳೆ ಈ ವಿಷಯ ಗೊತ್ತಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ(Central Bureau of Investigation – CBI). ಈ ಹಗರಣ ಕರ್ನಾಟಕಕ್ಕೂ (Karnataka State) ಚಾಚಿಕೊಂಡಿದ್ದು, ಶೇ.64ರಷ್ಟು ಸಂಸ್ಥೆಗಳು ನಕಲಿ ಎಂದು ಗೊತ್ತಾಗಿದೆ. ದೇಶಾದ್ಯಂತ ಒಟ್ಟು 830 ಸಂಸ್ಥೆಗಳು ಫೇಕ್ ಆಗಿದ್ದು, ಕಳೆದ ಐದು ವರ್ಷದಲ್ಲಿ 144.83 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಜುಲೈ 10 ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ದೂರನ್ನು ದಾಖಲಿಸಿದೆ ಎನ್ನಲಾಗಿದೆ. ತನಿಖೆಯು 34 ರಾಜ್ಯಗಳ 100 ಜಿಲ್ಲೆಗಳಲ್ಲಿ ವಿಚಾರಣೆಗಳನ್ನು ಒಳಗೊಂಡಿದೆ. 1572 ಸಂಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, 830 ಸಂಸ್ಥೆಗಳು ಮೋಸದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. 34 ರಾಜ್ಯಗಳಲ್ಲಿ 21 ರಾಜ್ಯಗಳಲ್ಲಿಈ ಭ್ರಷ್ಟಾಚಾರ ನಡೆದಿದ್ದು, ಉಳಿದ ರಾಜ್ಯಗಳ ಸಂಸ್ಥೆಗಳ ಕುರಿತು ಇನ್ನೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಈಗ ಅಧಿಕಾರಿಗಳು ಹಣದುರ್ಬಳಕೆ ಮಾಡಿಕೊಂಡಿರುವ 830 ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಹಿಡಿದಿಡಲಾಗಿದೆ.

ಸಚಿವಾಲಯದ ವಿದ್ಯಾರ್ಥಿವೇತನ ಕಾರ್ಯಕ್ರಮವು ಸುಮಾರು 1,80,000 ಸಂಸ್ಥೆಗಳನ್ನು ಕವರ್ ಮಾಡುತ್ತದೆ. 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳನ್ನು ಈ ಶಿಷ್ಯವೇತನ ಕಾರ್ಯಕ್ರಮವು ಒಳಗೊಂಡಿದೆ. 2007-2008ರ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಅಲ್ಪಸಂಖ್ಯಾತರ ಮೀಸಲಾದ ಈ ವಿದ್ಯಾರ್ಥಿವೇತನವನ್ನು ನಕಲಿ ಫಲಾನುಭವಿಗಳ ಮೂಲಕ ಸಂಸ್ಥೆಗಳು ಕ್ಲೇಮ್ ಮಾಡುವ ಮೂಲಕ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿವೆ.

ಈ ಸುದ್ದಿಯನ್ನೂ ಓದಿ: ಮೋದಿ ಅವಧಿಯಲ್ಲಿ ಸರ್ಕಾರಿ ಸೇವೆಗೆ ಅತಿ ಹೆಚ್ಚು ಅಲ್ಪಸಂಖ್ಯಾತರ ಸೇರ್ಪಡೆ: ಅಂಕಿ ಅಂಶ ಮುಂದಿಟ್ಟ ಕೇಂದ್ರ ಸಚಿವ ನಕ್ವಿ

ಯಾವ ರಾಜ್ಯದಲ್ಲಿ ಎಷ್ಟು ಹಗರಣ?

ಛತ್ತೀಸ್‌ಗಢದಲ್ಲಿರುವ ಎಲ್ಲ 62 ಸಂಸ್ಥೆಗಳನ್ನು ತನಿಖೆಗೊಳಪಡಿಸಲಾಗಿದ್ದು, ಈ ಪೈಕಿ ಎಲ್ಲವೂ ಫೇಕ್ ಇಲ್ಲವೇ ಕಾರ್ಯಾಚರಣೆ ನಡೆಸುತ್ತಿಲ್ಲ. ರಾಜಸ್ಥಾನದಲ್ಲಿ ಪರಿಶೀಲನೆ ಮಾಡಲಾದ 128 ಸಂಸ್ಥೆಗಳ ಪೈಕಿ 99 ಸಂಸ್ಥೆಗಳು ಫೇಕ್ ಅಥವಾ ಕಾರ್ಯಾಚರಣೆ ನಡೆಸುತ್ತಿಲ್ಲ. ಅದೇ ರೀತಿ, ಅಸ್ಸಾಮ್‌ನಲ್ಲಿ ಶೇ.68ರಷ್ಟು ಅಲ್ಪಸಂಖ್ಯಾತ ಸಂಸ್ಥೆಗಳು ನಕಲಿಯಾಗಿವೆ. ಇನ್ನು ಕರ್ನಾಟಕದಲ್ಲಿ ಶೇ.64, ಉತ್ತರ ಪ್ರದೇಶದಲ್ಲಿ ಶೇ.44 ಮತ್ತು ಪಶ್ಚಿಮ ಬಂಗಾಳದಲ್ಲಿನ ಅಲ್ಪಸಂಖ್ಯಾತ ಸಂಸ್ಥೆಗಳ ಪೈಕಿ 39 ಸಂಸ್ಥೆಗಳು ನಕಲಿಯಾಗಿವೆ ಎಂದು ತನಿಖೆಯಲ್ಲಿ ತಿಳಿದು ಬಂದಿವೆ.

Exit mobile version