ಮುಂಬೈ: “ಭಾರತವು ವಿಶ್ವಗುರು ಆಗುವುದನ್ನು ತಡೆಯುವ ದೃಷ್ಟಿಯಿಂದ ನಮ್ಮ ದೇಶದ ಕುರಿತು ತಪ್ಪು ಕಲ್ಪನೆಗಳನ್ನು ಪಸರಿಸಲಾಗುತ್ತಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಭಾರತದ ಕುರಿತು 1857ರ ಸ್ವಾತಂತ್ರ್ಯದ ಸಂಗ್ರಾಮದ ನಂತರ ದೇಶದ ಬಗ್ಗೆ ಜಾಗತಿಕವಾಗಿ ಇಂತಹ ತಪ್ಪುಕಲ್ಪನೆ ಬಿತ್ತಲಾಗಿತ್ತು. ಈಗ ಮತ್ತೆ ತಪ್ಪು ಮಾಹಿತಿಯನ್ನು ಪಸರಿಸಲಾಗುತ್ತಿದೆ” ಎಂದು ಹೇಳಿದರು.
“ಜಾಗತಿಕವಾಗಿ ಯಾವ ರಾಷ್ಟ್ರವೂ ನಮ್ಮ ಜತೆ ತರ್ಕದಿಂದ ವಾದಕ್ಕೆ ಬರುವುದಿಲ್ಲ. ನಾವು ಮುಂದಿನ 20-30 ವರ್ಷದಲ್ಲಿ ವಿಶ್ವಗುರು ಆಗುತ್ತೇವೆ. ಇದಕ್ಕಾಗಿ ನಾವು ಎರಡು ಪೀಳಿಗೆಯಾದರೂ ಬದಲಾವಣೆಯನ್ನು ಅನುಭವಿಸುವಂತೆ ಮಾಡಬೇಕು. ಭಾರತವು ಅಸಾಧ್ಯವಾದುದನ್ನು ಸಾಧಿಸುತ್ತದೆ. ಆದರೆ, ಇದನ್ನು ಸಹಿಸದ ಜಾಗತಿಕ ಶಕ್ತಿಗಳು ನಮ್ಮ ಕುರಿತು ತಪ್ಪು ಮಾಹಿತಿಯನ್ನು ಹರಡುತ್ತವೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕಳೆದ ಹಲವು ವರ್ಷಗಳಿಂದ ಭಾರತ ಅಗಾಧವಾದುದನ್ನು ಸಾಧಿಸುತ್ತಿದೆ. ಇದೊಂದೇ ಕಾರಣದಿಂದಾಗಿ ನಮ್ಮ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಲಾಗುತ್ತಿದೆ. ಆದರೂ, ಭಾರತದ ಎರಡು ಪೀಳಿಗೆಗಳು ಜಾಗತಿಕ ಷಡ್ಯಂತ್ರವನ್ನು ಮೀರಿ ಬೆಳೆಯಲು ಯತ್ನಿಸಬೇಕು. ಅದಕ್ಕಾಗಿ ಸಮರ್ಪಕ ಸಿದ್ಧತೆ ಮಾಡಿಕೊಳ್ಳಬೇಕು. ಒಳ್ಳೆಯತನದಿಂದಲೇ ಜಗತ್ತನ್ನು ನಮ್ಮತ್ತ ಸೆಳೆಯಬೇಕು. ಆ ಮೂಲಕ ವಿಶ್ವಗುರು ಆಗಬೇಕು” ಎಂದರು.
“1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಇದನ್ನು ಸಹಿಸದ ಜಾಗತಿಕ ಶಕ್ತಿಗಳು ದೇಶದ ಕುರಿತು ಇನ್ನಿಲ್ಲದಂತೆ ಅಪಪ್ರಚಾರ ಮಾಡಲಾಯಿತು. ಇದಕ್ಕೆ ಸ್ವಾಮಿ ವಿವೇಕಾನಂದ ಅವರು ಸರಿಯಾಗಿ ತಿರುಗೇಟು ನೀಡಿದರು. ಭಾರತದ ಬಗ್ಗೆ ಜಗತ್ತು ಹೊಂದಿರುವ ತಪ್ಪು ಕಲ್ಪನೆಯನ್ನೇ ಅವರು ದೂರ ಮಾಡಿದರು. ಈಗ ಭಾರತದ ಕುರಿತು ಜಗತ್ತು ಹೊಂದಿರುವ ತಪ್ಪು ಕಲ್ಪನೆಯನ್ನು ಸುಳ್ಳಾಗಿಸಲು ನಾವು ಕಾರ್ಯಪ್ರವೃತ್ತರಾಗಬೇಕು” ಎಂದು ಕರೆ ನೀಡಿದರು.
ಹಿಂದು ಸಮುದಾಯದ ವಿರುದ್ಧವೂ ಕುತಂತ್ರ
“ಹಿಂದುಗಳ ವಿರುದ್ಧವೂ ಕುತಂತ್ರ ನಡೆಯುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದರು. “ಹಿಂದು ಸಮುದಾಯವನ್ನು ಒಡೆಯಲು ಹೆಚ್ಚಿನ ಪ್ರಯತ್ನ ಮಾಡಲಾಗುತ್ತಿದೆ. ಸಮಾಜ ವಿರೋಧಿ ಪಡೆಗಳು ನಮ್ಮನ್ನು ನಾಶಪಡಿಸಲು ಯತ್ನಿಸುತ್ತಿವೆ. ನಮ್ಮನ್ನು ಇಬ್ಭಾಗ ಮಾಡಲು ಪ್ರಯತ್ನಿಸುತ್ತಿವೆ. ಜಗತ್ತೇ ಹಿಂದುತ್ವದ ಮೇಲೆ ನಂಬಿಕೆ ಇಟ್ಟರೂ, ನಮ್ಮ ನಮ್ಮಲ್ಲೇ ವಿಶ್ವಾಸಘಾತುಕತನ ಮೂಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಮೀರಿ ಹಿಂದು ಧರ್ಮೀಯರು ಒಗ್ಗಟ್ಟು ಪ್ರದರ್ಶಿಸಬೇಕು” ಎಂದರು.
ಇದನ್ನೂ ಓದಿ: Mohan Bhagwat: ಪಾಕ್ ಜನಕ್ಕೆ ನೆಮ್ಮದಿ ಇಲ್ಲ, ದೇಶ ವಿಭಜನೆ ಪ್ರಮಾದ ಎಂಬ ಭಾವನೆ ಇದೆ: ಮೋಹನ್ ಭಾಗವತ್