ಲಖನೌ: ಸಮಾಜವಾದಿ ಪಕ್ಷದ ರಾಜಕಾರಣಿಯಾಗಿದ್ದ, ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮಗ ಅಸಾದ್ ಅಹ್ಮದ್‌ನನ್ನು ಉತ್ತರ ಪ್ರದೇಶದ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಈ ಕುರಿತು ಪರ-ವಿರೋಧದ ಚರ್ಚೆಯಾಗುತ್ತಿದೆ. ಯೋಗಿ ಆದಿತ್ಯನಾಥ್ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದು ನಕಲಿ ಎನ್‌ಕೌಂಟರ್ ಎಂದು ದೂರುತ್ತಿವೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಫಿಯಾ ದಂಧೆಯಲ್ಲಿ ತೊಡಗಿದವರನ್ನು “ಮಣ್ಣಲ್ಲಿ ಹೂತು ಹಾಕುತ್ತೇನೆ” (Mitti Mein Mila Dunga) ಎಂದು ವಿಧಾನಸಭೆಯಲ್ಲಿ ಹೇಳಿದ ವಿಡಿಯೊ ಈಗ ವೈರಲ್ ಆಗಿದೆ.
ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆಯಾಗಿತ್ತು. ಇದೇ ವೇಳೆ ಯೋಗಿ ಆದಿತ್ಯನಾಥ್ ಅವರು ಫೆಬ್ರವರಿ 25ರಂದು ವಿಧಾನಸಭೆಯಲ್ಲಿ ಮಾತನಾಡುತ್ತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಹರಿಹಾಯ್ದಿದ್ದರು. “ಉತ್ತರ ಪ್ರದೇಶದ ಎಲ್ಲ ಕ್ರಿಮಿನಲ್‌ಗಳ ಗಾಡ್‌ಫಾದರ್ ಎಂದರೆ ಅಖಿಲೇಶ್ ಯಾದವ್. ಅವರ ಧಮನಿಯಲ್ಲೇ ಕ್ರಿಮಿನಲ್ ಇದ್ದಾನೆ. ಆದರೆ, ನಾನೊಂದು ಮಾತು ಹೇಳುತ್ತೇನೆ ಕೇಳಿ. ರಾಜ್ಯದಲ್ಲಿ ಮಾಫಿಯಾದಲ್ಲಿ ತೊಡಗಿರುವವರನ್ನು ಮಣ್ಣಲ್ಲಿ ಹೂತು ಹಾಕುತ್ತೇನೆ” ಎಂದು ಯೋಗಿ ಆದಿತ್ಯನಾಥ್ ಗುಡುಗಿದ್ದರು.
ಇಲ್ಲಿದೆ ಯೋಗಿ ಆವಾಜ್ ವಿಡಿಯೊ
ಈ ವಿಡಿಯೊ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಯೋಗಿ ಆದಿತ್ಯನಾಥ್ ಅವರು ಹೇಳಿದ ಒಂದೊಂದು ಮಾತೂ ನಿಜರೂಪಕ್ಕೆ ತರುತ್ತಿದ್ದಾರೆ ಎಂದು ಜನ ಪ್ರತಿಕ್ರಿಯಿಸಿದ್ದಾರೆ. ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್ ಕೂಡ ಗ್ಯಾಂಗ್‌ಸ್ಟರ್ ಆಗಿದ್ದು, ಆತನ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು. ಗುರುವಾರ ಬೆಳಗ್ಗೆ ಅಸಾದ್‌ನನ್ನು ಝಾನ್ಸಿಯಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಮಗನ ಸಾವಿನ ಕುರಿತ ಸುದ್ದಿ ತಿಳಿದು ಅತೀಕ್ ಅಹ್ಮದ್ ಕುಸಿದುಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಯೋಗಿ ವಿರುದ್ಧ ಅಖಿಲೇಶ್ ಆಕ್ರೋಶ
ಅಸಾದ್ ಅಹ್ಮದ್‌ನನ್ನು ಎನ್‌ಕೌಂಟರ್ ಮಾಡಿದ ಬೆನ್ನಲ್ಲೇ ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಸಾದ್ ಅಹ್ಮದ್ ಹಾಗೂ ಆತನ ಆಪ್ತನನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ. ರಾಜ್ಯದಲ್ಲಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಬೇರೆ ಸೆಳೆಯಲು ರಾಜ್ಯ ಸರ್ಕಾರ ಇಂತಹ ಕೃತ್ಯಗಳಲ್ಲಿ ತೊಡಗಿದೆ” ಎಂದು ಹೇಳಿದ್ದಾರೆ. “ಬಿಜೆಪಿಗೆ ಕಾನೂನು ಹಾಗೂ ಕೋರ್ಟ್‌ಗಳ ಬಗ್ಗೆ ಗೌರವ ಇಲ್ಲ. ಹಾಗಾಗಿ, ಅದೇ ಕಾರಣದಿಂದಾಗಿ ಕಾನೂನನ್ನು ಕೈಗೆತ್ತಿಕೊಳ್ಳಲಾಗಿದೆ. ಅಧಿಕಾರದಲ್ಲಿರುವವರು ಯಾರು ಸರಿ, ಯಾರು ತಪ್ಪು ಎಂದು ಹೇಳಲು, ಯಾರು ಬದುಕಬೇಕು, ಯಾರು ಸಾಯಬೇಕು ಎಂದು ತೀರ್ಮಾನಿಸುವುದು ಸರಿಯಲ್ಲ” ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Asad Encounter: ಅಸಾದ್ ಅಹ್ಮದ್ ಎನ್‌ಕೌಂಟರ್ ನಕಲಿ ಎಂದ ಅಖಿಲೇಶ್ ಯಾದವ್; ತನಿಖೆಯಾಗಲಿ ಎಂದ ಮಾಯಾವತಿ