Site icon Vistara News

Mizoram Assembly Election: ಕ್ರಿಶ್ಚಿಯನ್ಸ್ ವಿರೋಧಿ ಬಿಜೆಪಿ! ಮೋದಿ ಜತೆ ವೇದಿಕೆ ಜತೆ ಹಂಚಿಕೊಳ್ಳಲ್ಲ: ಮಿಜೋರಾಮ್ ಸಿಎಂ

Mizoram Assembly Election and Wont share stage with PM Narendra Modi Says Mizoram CM

ನವದೆಹಲಿ: ವಿಧಾನಸಭೆ ಚುನಾವಣೆ (Mizoram Assembly Election) ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಿಜೋರಾಮ್ ಮುಖ್ಯಮಂತ್ರಿ ಝೋರಮ್‌ತಂಗಾ (Mizoram Chief Minister Zoramthanga) ಅವರು ಹೇಳಿದ್ದಾರೆ. ಅಕ್ಟೋಬರ್ 30ರಂದು ಪ್ರಧಾನಿ ಮೋದಿ ಅವರು ಪಶ್ಚಿಮ ಮಿಜೋರಾಮ್‌ನ ಮಮಿತ್ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡಲಿದ್ದಾರೆ. ಕ್ರಿಶ್ಚಿಯನ್ ವಿರೋಧಿ ನೀತಿಯನ್ನು (Anti-Christian) ಅನುಸರಿಸುತ್ತಿರುವ ಪ್ರಧಾನಿ ಜತೆ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಿಜೋರಾಮ್‌ನ ಜನರೆಲ್ಲರೂ ಕ್ರಿಶ್ಚಿಯನ್ನರು. ಮಣಿಪುರದ ಜನರು (ಮೈತಿಗಳು) ಮಣಿಪುರದಲ್ಲಿ ನೂರಾರು ಚರ್ಚ್‌ಗಳನ್ನು ಸುಟ್ಟುಹಾಕಿದ್ದಾರೆ. ಮಿಜೋಗಳು ಈ ಕೃತ್ಯವನ್ನು ವಿರೋಧಿಸುತ್ತಾರೆ. ಈ ಸಮಯದಲ್ಲಿ ಬಿಜೆಪಿಯೊಂದಿಗೆ ಸಹಾನುಭೂತಿ ಪ್ರದರ್ಶಿಸಿದರೆ ನಮ್ಮ ಪಕ್ಷಕ್ಕೆ ಬಹುದೊಡ್ಡ ನಷ್ಟವಾಗಲಿದೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಝೋರಮ್‌ತಂಗಾ ಅವರು ಹೇಳಿದ್ದಾರೆ.

ಪ್ರಧಾನಿ ಒಬ್ಬರೇ ಬಂದು ವೇದಿಕೆ ಹಂಚಿಕೊಂಡರೆ ಉತ್ತಮ, ನಾನೇ ಪ್ರತ್ಯೇಕವಾಗಿ ವೇದಿಕೆ ಏರುತ್ತೇನೆ ಎಂದರು. ಝೋರಮ್‌ತಂಗಾ ಅವರ ಎಂಎನ್ಎಫ್‌ ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (NEDA) ಭಾಗವಾಗಿದೆ ಮತ್ತು ಕೇಂದ್ರದಲ್ಲಿ ಎನ್‌ಡಿಎಂ ಮಿತ್ರಪಕ್ಷವಾಗಿದೆ. ಹಾಗಿದ್ದೂ, ಮಿಜೋರಾಂನಲ್ಲಿ ಬಿಜೆಪಿ ಜತೆ ಪಕ್ಷ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Assembly Election 2023: ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್!

ಕಾಂಗ್ರೆಸ್ ಪಕ್ಷದ ವಿರುದ್ಧವಾಗಿರುವುದರಿಂದ ಎಂಎನ್ಎಫ್ ಎನ್‌ಡಿಎ ಮತ್ತು ಎನ್‌ಇಡಿಎ ಕೂಟವನ್ನು ಸೇರ್ಪಡೆಯಾಗಿದೆ. ಅಲ್ಲದೇ ಕಾಂಗ್ರೆಸ್ ನೇತೃತ್ವದ ಕೂಟದ ಭಾಗವಾಗಲು ಇಷ್ಟಪಡುವುದಿಲ್ಲ ಎಂದು ಮುಖ್ಯಮಂತ್ರಿ ಝೋರಮ್‌ತಂಗಾ ಅವರು ಹೇಳಿದ್ದಾರೆ. ಇದೇ ವೇಳೆ, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಮಮಿಪುರ್ ಜನರಿಗೆ ಆಶ್ರಯ ನೀಡಿದ್ದರ ಕುರಿತು ಪ್ರತಿಕ್ರಿಯಿಸಿದ ಝೋರಮ್‌ತಂಗಾ, ಮಿಜೋರಾಮ್ ಸರ್ಕಾರವು ಕೇಂದ್ರ ಸರ್ಕಾರದ ಹೆಜ್ಜೆಗಳನ್ನೇ ಫಾಲೋ ಮಾಡುತ್ತಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಬಾಂಗ್ಲಾದೇಶ, ಮಣಿಪುರ, ಮ್ಯಾನ್ಮಾರ್‌ನಿಂದ 40 ಸಾವಿರ ಜನರಿಗೆ ಮಿಜೋರಾಂ ಆಶ್ರಯ ಕಲ್ಪಿಸಿದೆ. ಮಣಿಪುರದಲ್ಲಿ ಶಾಂತಿ ಸ್ಥಾಪನೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಶಾಂತಿ ಸ್ಥಾಪನೆಯಾದರೆ ಮಿಜೋರಾಮ್‌ನಲ್ಲಿ ಆಶ್ರಯ ಪಡೆದುಕೊಂಡಿರುವವರು ವಾಪಸ್ ತಮ್ಮ ರಾಜ್ಯಕ್ಕೆ ಹೋಗಬಹುದು ಎಂದು ಅವರು ತಿಳಿಸಿದ್ದಾರೆ. ಮಿಜೋರಾಮ್ ವಿಧಾನಸಭೆಗೆ ನವೆಂಬರ್ 7ರಂದು ಚುನಾವಣೆ ನಡೆಯಲಿದೆ ಮತ್ತು ಡಿಸೆಂಬರ್ 3ರಂದು ಫಲಿತಾಂಶವು ಪ್ರಕಟವಾಗಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version