ಐಜ್ವಾಲ್: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Elections 2023) ಪ್ರಕಟವಾಗಿದ್ದು, ರಾಜಕೀಯ ಪಕ್ಷಗಳು ಸೋಲು-ಗೆಲುವಿಗೆ ಕಾರಣಗಳನ್ನು ಹುಡುಕುವುದು, ಆತ್ಮಾವಲೋಕನ, ಸಂಭ್ರಮಾಚರಣೆಯಲ್ಲಿ ತೊಡಗಿವೆ. ಇದರ ಬೆನ್ನಲ್ಲೇ ಸೋಮವಾರ (ಡಿಸೆಂಬರ್ 4) ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶವೂ (Mizoram Election Result) ಪ್ರಕಟವಾಗಲಿದ್ದು, ಪ್ರಾದೇಶಿಕ ಪಕ್ಷಗಳ ಸಮರದಲ್ಲಿ ಯಾವ ಪಕ್ಷ ಗೆಲುವು ಸಾಧಿಸಲಿದೆ ಎಂಬ ಕುತೂಹಲ ಮೂಡಿದೆ.
ಈಶಾನ್ಯ ರಾಜ್ಯ ಮಿಜೋರಾಮ್‌ನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ (Congress Party) ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಮತದಾರರು ಆಡಳಿತಾರೂಢ ಎಂಎನ್‌ಎಫ್ ಪರವಾಗಿ ತಮ್ಮ ಒಲವು ತೋರಿಸಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಇಷ್ಟಾಗಿಯೂ ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನು ಊಹಿಸಿವೆ. ಅಂತಿಮವಾಗಿ ಯಾರ ಪಾಲಿಗೆ ಜಯ ದಕ್ಕಲಿದೆ ಎಂಬುದು ಸೋಮವಾರ ಗೊತ್ತಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.
40 ಸದಸ್ಯರ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ಶಾಂತಿಯುತವಾಗಿ ನಡೆದಿತ್ತು. ಶೇಕಡಾ 80 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಈ ಬಾರಿ ಮಿಜೋರಾಂನಲ್ಲಿ ಶೇ.81.25ರಷ್ಟು ಮಹಿಳಾ ಮತದಾರರು ಹಾಗೂ ಶೇ.80.04ರಷ್ಟು ಪುರುಷ ಮತದಾರರು ಮತ ಚಲಾಯಿಸಿದ್ದಾರೆ. ರಾಜ್ಯದ ಒಟ್ಟು 8.52 ಲಕ್ಷ ಮತದಾರರಲ್ಲಿ ಶೇಕಡಾ 174 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ರಾಜ್ಯದ ಎಲ್ಲಾ 11 ಜಿಲ್ಲೆಗಳ ಪೈಕಿ, ಸೆರ್ಚಿಪ್ ಜಿಲ್ಲೆಯಲ್ಲಿ ಅತಿ ಹೆಚ್ಚು 84.78% ಮತದಾನ ದಾಖಲಾಗಿದ್ದು, ಮಾಮಿತ್ ಜಿಲ್ಲೆಯಲ್ಲಿ 84.65%, ಹನ್ಹಥಿಯಾಲ್ ಜಿಲ್ಲೆಯಲ್ಲಿ 84.19% ಮತ್ತು ಲುಂಗ್ಲೈ ಜಿಲ್ಲೆಯಲ್ಲಿ 83.68% ಮತದಾನವಾಗಿದೆ.
ಇದನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!
18 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಮತ್ತು ಕಾಂಗ್ರೆಸ್ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದಕ್ಕೆ ಹೋಲಿಸಿದರೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಕ್ರಮವಾಗಿ 23 ಮತ್ತು 4 ಸ್ಥಾನಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿವೆ. 2018 ರ ನವೆಂಬರ್ನಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು, ಝೆಡ್‌ಪಿಎಂ 8 ಸ್ಥಾನಗಳನ್ನು, ಕಾಂಗ್ರೆಸ್ 5 ಮತ್ತು ಬಿಜೆಪಿ 1 ಸ್ಥಾನಗಳನ್ನು ಗೆದ್ದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023