Site icon Vistara News

Mizoram Election Result: ಮಿಜೋರಾಂನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ, ಝೆಡ್‌ಪಿಎಂ ಬಹುಮತದತ್ತ!

Lalduhoma

Mizoram Election Result 2023: ZPM takes early lead

ಐಜ್ವಾಲ್:‌ ಮಿಜೋರಾಂನಲ್ಲಿ ಮತ ಎಣಿಕೆ ಆರಂಭವಾಗಿದ್ದು, ಝೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಪಕ್ಷವು (Mizoram Election Result) ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಒಟ್ಟು 40 ವಿಧಾನಸಭೆ ಕ್ಷೇತ್ರಗಳ ಪೈಕಿ ಪ್ರತಿಪಕ್ಷ ಝೆಡ್‌ಪಿಎಂ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಆಡಳಿತಾರೂಢ ಎಂಎನ್‌ಎಫ್‌ 9, ಕಾಂಗ್ರೆಸ್‌ 2 ಹಾಗೂ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಂಚೆ ಮತಗಳ ಎಣಿಕೆ ಮುಗಿದು, ಮತಯಂತ್ರಗಳಲ್ಲಿ ದಾಖಲಾದ ಮತಗಳನ್ನು ಎಣಿಸಲಾಗುತ್ತಿದೆ. ಆರಂಭದಿಂದಲೂ ಝೆಡ್‌ಪಿಎಂ ಮುನ್ನಡೆ ಕಾಯ್ದುಕೊಂಡಿದೆ.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಕಾಂಗ್ರೆಸ್‌, ಮಿಜೋರಾಂನಲ್ಲೂ ಹಿನ್ನಡೆ ಅನುಭವಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ ಈಗ 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇನ್ನು ಕಳೆದ ಬಾರಿ ಒಂದೇ ಕ್ಷೇತ್ರ ಗೆದ್ದಿದ್ದ ಬಿಜೆಪಿ ಈಗ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ 21 ಮ್ಯಾಜಿಕ್‌ ನಂಬರ್‌ ಆಗಿದ್ದು, ಇದನ್ನು ಝೆಪಿಎಂ ಸುಲಭವಾಗಿ ದಾಟಲಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಮಧ್ಯಾಹ್ನದ ಬಳಿಕವೇ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿದುಬಂದಿದೆ.

40 ಸದಸ್ಯರ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ಶಾಂತಿಯುತವಾಗಿ ನಡೆದಿತ್ತು. ಶೇಕಡಾ 80 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಈ ಬಾರಿ ಮಿಜೋರಾಂನಲ್ಲಿ ಶೇ.81.25ರಷ್ಟು ಮಹಿಳಾ ಮತದಾರರು ಹಾಗೂ ಶೇ.80.04ರಷ್ಟು ಪುರುಷ ಮತದಾರರು ಮತ ಚಲಾಯಿಸಿದ್ದಾರೆ. ರಾಜ್ಯದ ಒಟ್ಟು 8.52 ಲಕ್ಷ ಮತದಾರರಲ್ಲಿ ಶೇಕಡಾ 174 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ರಾಜ್ಯದ ಎಲ್ಲಾ 11 ಜಿಲ್ಲೆಗಳ ಪೈಕಿ, ಸೆರ್ಚಿಪ್ ಜಿಲ್ಲೆಯಲ್ಲಿ ಅತಿ ಹೆಚ್ಚು 84.78% ಮತದಾನ ದಾಖಲಾಗಿದ್ದು, ಮಾಮಿತ್ ಜಿಲ್ಲೆಯಲ್ಲಿ 84.65%, ಹನ್ಹಥಿಯಾಲ್ ಜಿಲ್ಲೆಯಲ್ಲಿ 84.19% ಮತ್ತು ಲುಂಗ್ಲೈ ಜಿಲ್ಲೆಯಲ್ಲಿ 83.68% ಮತದಾನವಾಗಿದೆ.

ಇದನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!

18 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಮತ್ತು ಕಾಂಗ್ರೆಸ್ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದಕ್ಕೆ ಹೋಲಿಸಿದರೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಕ್ರಮವಾಗಿ 23 ಮತ್ತು 4 ಸ್ಥಾನಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿವೆ. 2018 ರ ನವೆಂಬರ್​ನಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು, ಝೆಡ್‌ಪಿಎಂ 8 ಸ್ಥಾನಗಳನ್ನು, ಕಾಂಗ್ರೆಸ್ 5 ಮತ್ತು ಬಿಜೆಪಿ 1 ಸ್ಥಾನ ಗೆದ್ದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Exit mobile version