ಚೆನ್ನೈ: ಕರ್ನಾಟಕದ ಜತೆಗಿನ ಮೇಕೆದಾಟು ವಿವಾದದಲ್ಲಿ ಸುಪ್ರೀಂಕೋರ್ಟ್ ತೀರ್ಪೇ ಅಂತಿಮ ಅದನ್ನು ಹೊರತುಪಡಿಸಿ ಬೇರೆ ಯಾರ ಮಾತನ್ನೂ ಕೇಳುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಮೇಕೆದಾಟು ವಿಷಯವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಚರ್ಚಿಸಬಹುದು ಎಂಬ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದಾರ್ ಅವರ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಪ್ರಾಧಿಕಾರ ಈ ವಿಷಯದಲ್ಲಿ ಯಾವುದೇ ಚರ್ಚೆ ನಡೆಸುವ ಹಾಗಿಲ್ಲ ಎಂದರು.
ಹಲ್ದಾರ್ ಅವರು ಶನಿವಾರ ತಂಜಾವೂರು ಜಿಲ್ಲೆಯ ಕಲ್ಲನೈ ಅಣೆಕಟ್ಟು ಪರಿಶೀಲಿಸಿದ ನಂತರ ಮಾತನಾಡಿದ್ದರು.
ಕರ್ನಾಟಕವು ಮೇಕೆದಾಟು ಅಣೆಕಟ್ಟು ನಿರ್ಮಿಸಲು ಮುಂದಾಗಿರುವುದು ತಮಿಳುನಾಡಿನ ಜನರನ್ನು ಕೆರಳಿಸಿದೆ. ರಾಜ್ಯ ಸರಕಾರವು ಜನರ ಭಾವನೆಯನ್ನು ಕೇಂದ್ರ ಸರಕಾರಕ್ಕೆ ತಿಳಿಸಲು ನಿಯೋಗ ಕಳುಹಿಸಲಾಗುವುದು ಎಂದು ಅವರು ಹೇಳಿದರು.
ಬೊಮ್ಮಾಯಿ ಒತ್ತಡಕ್ಕೆ ಮಣಿಯದಿರಿ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ಭೇಟಿ ನೀಡಿ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿರುವುದನ್ನು ಉಲ್ಲೇಖಿಸಿದ ಅವರು, ಯಾವ ಕಾರಣಕ್ಕೂ ಕರ್ನಾಟಕದ ಒತ್ತಡಕ್ಕೆ ಮಣಿಯಬಾರದು ಎಂದು ಕೇಂದ್ರವನ್ನು ವಿನಂತಿಸಿದರು.
ತಮಿಳುನಾಡಿನ ಜಲಸಂಪನ್ಮೂಲ ಸಚಿವರಾದ ದೊರೈಮುರುಗನ್ ಅವರ ನೇತೃತ್ವದ ನಿಯೋಗ ಶೀಘ್ರವೇ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸ್ಟಾಲಿನ್ ತಿಳಿಸಿದರು. ಇದನ್ನೂ ಓದಿ| ಮೇಕೆದಾಟು ಯೋಜನೆ: ಸ್ಟಾಲಿನ್ ಮಾತಿಗೆ ಮನ್ನಣೆ ಬೇಡ, ಕೇಂದ್ರ ಸಚಿವ ಶೆಖಾವತ್ಗೆ ಬೊಮ್ಮಾಯಿ ಮನವಿ