ಚೆನ್ನೈ: ತಮಿಳುನಾಡಿನಲ್ಲಿ ಎಂ.ಕರುಣಾನಿಧಿ ಕುಟುಂಬದ ಮೂರನೇ ಪೀಳಿಗೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ಉದಯನಿಧಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ಟಾಲಿನ್ ಪುತ್ರನಿಗೆ ಯುವ ಕಲ್ಯಾಣ ಹಾಗೂ ಕ್ರೀಡಾಭಿವೃದ್ಧಿ ಖಾತೆ ನೀಡಲಾಗಿದೆ.
2021ರ ವಿಧಾನಸಭೆ ಚುನಾವಣೆಯಲ್ಲಿ ಚೆಪಾಕ್-ತಿರುವಳ್ಳಿಕೇಣಿ ಕ್ಷೇತ್ರದಲ್ಲಿ ಸ್ಪರ್ಧಿಸಿ, ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿರುವ 45 ವರ್ಷದ ಉದಯನಿಧಿ, ಡಿಎಂಕೆಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಇವರು ನಟ, ನಿರ್ಮಾಪಕ ಹಾಗೂ ಸಿನಿಮಾ ಡಿಸ್ಟ್ರಿಬ್ಯೂಟರ್ ಕೂಡ ಆಗಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ತಂದೆಗೆ ಧನ್ಯವಾದ ಹೇಳಿದ ಉದಯನಿಧಿ, “ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುವೆ” ಎಂದು ಹೇಳಿದ್ದಾರೆ. ಚೆಪಾಕ್-ತಿರುವಳ್ಳಿಕೇಣಿಯು ಉದಯನಿಧಿ ತಾತ, ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಕ್ಷೇತ್ರ ಎಂಬುದು ವಿಶೇಷ.
ಪ್ರತಿಪಕ್ಷಗಳಿಂದ ಟೀಕೆ
ಮೊದಲ ಬಾರಿಯ ಶಾಸಕ ಉದಯನಿಧಿ ಅವರಿಗೆ ಸಚಿವ ಸ್ಥಾನ ನೀಡಿರುವ ಕುರಿತು ಪ್ರತಿಪಕ್ಷಗಳಾದ ಎಐಎಡಿಎಂಕೆ ಹಾಗೂ ಬಿಜೆಪಿಯು ಟೀಕಿಸಿವೆ. “ಇದು ಕುಟುಂಬ ರಾಜಕಾರಣದ ದ್ಯೋತಕವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿವೆ. ಎಂ.ಕೆ.ಸ್ಟಾಲಿನ್ ಸಹೋದರಿ ಕನಿಮೋಳಿ ಸಂಸದೆಯಾಗಿದ್ದಾರೆ.
ತಮಿಳುನಾಡಿನಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಿದ್ದು, ಎಂಕೆ.ಸ್ಟಾಲಿನ್ ಅವರು ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದಾರೆ. ಉದಯನಿಧಿ ಸೇರ್ಪಡೆಯೊಂದಿಗೆ ತಮಿಳುನಾಡಿನಲ್ಲಿ ಸಚಿವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ | India-Hindia | ಇಂಡಿಯಾವನ್ನು ಹಿಂಡಿಯಾವನ್ನಾಗಿ ಮಾಡಬೇಡಿ: ಬಿಜೆಪಿಗೆ ತ.ನಾಡು ಸಿಎಂ ಸ್ಟಾಲಿನ್ ತರಾಟೆ