ಗಾಝಿಪುರ: ಕಳಪೆಯಾದ ರಸ್ತೆಯನ್ನು ನೋಡಿ ಶಾಸಕರೊಬ್ಬರು ಕೆಂಡಾಮಂಡಲರಾಗಿ, ತಮ್ಮ ಬೂಟು ಕಾಲಿನಿಂದ ಆ ರಸ್ತೆಯನ್ನು ಕೆದರಿ, ಜಲ್ಲಿಕಲ್ಲು, ಡಾಂಬರುಗಳನ್ನೆಲ್ಲ ತೆಗೆದು ತೋರಿಸಿದ ಘಟನೆ ಉತ್ತರ ಪ್ರದೇಶದ ಗಾಝಿಪುರದಲ್ಲಿ ನಡೆದಿದೆ. ಶಾಸಕರ ಆಕ್ರೋಶ ಮತ್ತು ಅವರು ಕಾಲಿನಿಂದಲೇ ರಸ್ತೆಯನ್ನು ಕೆದರಿದ, ಗುತ್ತಿಗೆದಾರನಿಗೆ ಬಾಯಿಗೆ ಬಂದಂತೆ ಬೈದಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ ಶಾಸಕ ಬೇದಿರಾಮ್ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಗಾಝಿಪುರಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿ ಒಂದು ಕಡೆ ಹಾಳಾದ ರಸ್ತೆಯನ್ನು ನೋಡಿದ ಅವರು ಉಗ್ರಸ್ವರೂಪ ತಾಳಿದ್ದಾರೆ. ‘ಇದಕ್ಕೆ ಯಾರಾದರೂ ರಸ್ತೆ ಎನ್ನುತ್ತಾರಾ? ಇಲ್ಲಿ ಕಾರು ಸಂಚಾರ ಮಾಡಬಹುದಾ?’ ಎಂದು ಕೋಪದಿಂದ ಗುತ್ತಿಗೆದಾರನ ಬಳಿ ಪ್ರಶ್ನಿಸಿದ್ದಾರೆ.
‘ಗಾಝಿಪುರದಲ್ಲಿ ಹಲವು ಕಡೆಗಳಲ್ಲಿ ರಸ್ತೆ ಸರಿಯಿಲ್ಲ ಎಂದು ಸ್ಥಳೀಯರು ದೂರು ಕೊಟ್ಟ ಕಾರಣಕ್ಕೆ, ಪರಿಶೀಲನೆ ನಡೆಸಲು ಅಲ್ಲಿಗೆ ತೆರಳಿದ್ದೆ. ಆದರೆ ನಾನು ಅಲ್ಲಿಗೆ ಹೋದರೆ ಪಿಡಬ್ಲ್ಯೂಡಿ ಇಲಾಖೆಯ ಯಾವ ಅಧಿಕಾರಿಯೂ ಇರಲಿಲ್ಲ. ಹೀಗಾಗಿ ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಏನೆಂದು ತೋರಿಸಿದ್ದೇನೆ. ಅದಾದ ಮೇಲೆ ಪಿಡಬ್ಲ್ಯೂಡಿ ಉನ್ನತ ಅಧಿಕಾರಿಯೊಂದಿಗೆ ಮಾತಾಡಿದ್ದೇನೆ. ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಲಾಗಿದ್ದರೂ, ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಲ್ಲ. ಒಂದು ವರ್ಷ ಬಿಡಿ, ಆರು ತಿಂಗಳೂ ಕೂಡ ರಸ್ತೆ ಬಾಳಿಕೆಗೆ ಬರುವುದಿಲ್ಲ’ ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದಹಾಗೇ, ಶಾಸಕ ಬೇದಿರಾಮ್ ಅವರು ಭೇಟಿಕೊಟ್ಟಿದ್ದು ಗಾಝಿಪುರದ ಜಖಾನಿಯನ್ ಏರಿಯಾದಲ್ಲಿ ನಿರ್ಮಿಸಲಾದ, ಜಂಗೀಪುರ- ಬಹರಿಯಾಬಾದ್-ಯೂಸುಫ್‌ಪುರ್ ಸಂಪರ್ಕ ರಸ್ತೆಗೆ. ಇಲ್ಲಿ 4.5 ಕಿಮೀಗಳಷ್ಟು ದೂರವನ್ನು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿತ್ತು. ಆದರೆ ಈಗಲೇ ಹಾಳಾಗಿದೆ. ಹೀಗಾಗಿ ಸ್ಥಳೀಯರು ಒಟ್ಟಾಗಿ ಅಲ್ಲಿನ ಶಾಸಕರಿಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಹಾಳಾದ ರಸ್ತೆಯ ಚಿತ್ರಣ ಬಹಿರಂಗವಾಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಪಿಲಿಬಿತ್ನಲ್ಲಿ ನಾಗರಿಕರೊಬ್ಬರು ರಸ್ತೆಯನ್ನು ತಮ್ಮ ಕೈಗಳಿಂದಲೇ ಕಿತ್ತು ಹಾಕಿದ್ದರು. ರಸ್ತೆ ಮೇಲ್ಮೈಯೆಲ್ಲ ಕಿತ್ತುಬಂದಿದ್ದನ್ನು ತೋರಿಸಿದ್ದರು. ಅದೆಷ್ಟು ಕಳಪೆಯಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ನೋಡಿ ಎಂದು ವಿಡಿಯೊ ಮೂಲಕ ತೋರಿಸಿದ್ದರು. ಆ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.