ನಾಗ್ಪುರ: ನ್ಯೂಜಿಲೆಂಡ್ ಪ್ರಧಾನಮಂತ್ರಿ ಜೆಸಿಂಡಾ ಆರ್ಡರ್ನ್ ಅವರು 2018ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ತಮ್ಮ ಮೂರು ತಿಂಗಳ ಮಗುವನ್ನೂ ಕರೆದುಕೊಂಡು ಹೋಗಿದ್ದರು. ಹೀಗೆ ವಿಶ್ವಸಂಸ್ಥೆಗೆ ಜನಪ್ರತಿನಿಧಿಯೊಬ್ಬರು ಮಗುವಿನೊಂದಿಗೆ ಹೋಗಿದ್ದು ಅದೇ ಮೊದಲ ಬಾರಿ ಆಗಿತ್ತು. 2017ರಲ್ಲಿ ಆಸ್ಟ್ರೇಲಿಯಾದ ಸಂಸದೆಯೊಬ್ಬರು ಹಸುಗೂಸನ್ನು ಎತ್ತಿಕೊಂಡು ಸಂಸತ್ತಿಗೆ ಹೋಗಿದ್ದರು. ಅದಾದ ಮೇಲೆ 2019ರಲ್ಲಿ ನ್ಯೂಜಿಲೆಂಡ್ನಲ್ಲೇ ಸಂಸದೆಯೊಬ್ಬರು ತನ್ನ ನವಜಾತ ಶಿಶುವನ್ನು ಎತ್ತಿಕೊಂಡೇ ಸಂಸತ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಹೀಗೆ ವಿದೇಶಗಳಿಂದ ಇಂಥ ವರದಿ ಆಗಾಗ ಬರುತ್ತಿತ್ತು.
ಹೀಗಿರುವಾಗ ನಮ್ಮ ಭಾರತದಲ್ಲೂ ಮಹಾರಾಷ್ಟ್ರದ ಶಾಸಕಿಯೊಬ್ಬಳು ತಮ್ಮ ಎರಡೂವರೆ ತಿಂಗಳ ಹಸುಗೂಸುವನ್ನು ಎತ್ತಿಕೊಂಡು ಮಹಾರಾಷ್ಟ್ರ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡರು. ಎನ್ಸಿಪಿ ಪಕ್ಷದ ನಾಗ್ಪುರ ಶಾಸಕಿ ಸರೋಜ್ ಬಬುಲಾ ಅಹಿರೆ ಅವರು ಸೆಪ್ಟೆಂಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರ (ಡಿ.19)ದಿಂದ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ಇವರು ಬೆಳಗ್ಗೆ ಬರುವಾಗ ಪತಿ ಮತ್ತು ಪುಟ್ಟ ಕೂಸಿನೊಂದಿಗೆ ಬಂದಿದ್ದಾರೆ. ಅಷ್ಟರೊಳಗೆ ಮುಖ್ಯಮಂತ್ರಿ ಏಕನಾಥ ಶಿಂಧೆಯವರೂ ಆಗಮಿಸಿಯಾಗಿತ್ತು. ಶಾಸಕಿ ಸರೋಜ್ ತಮ್ಮ ಮಗುವಿನ ಸಹಿತ ಬಂದಿದ್ದನ್ನು ಶಿಂಧೆ ಶ್ಲಾಘಿಸಿದ್ದಾರೆ. ಇನ್ನು ಶಾಸಕಿ, ಆಕೆಯ ಪುಟ್ಟ ಮಗುವಿನ ಜತೆ ಏಕನಾಥ ಶಿಂಧೆ ಫೋಟೋಕ್ಕೆ ಪೋಸ್ ಕೂಡ ಕೊಟ್ಟಿದ್ದಾರೆ.
ನಾಗ್ಪುರದಲ್ಲಿರುವ ವಿಧಾನ ಭವನ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಹಿರೆ, ‘ಈ ರಾಜ್ಯದ ಮತ್ತು ಇಲ್ಲಿನ ಜನರ ಕುಂದುಕೊರತೆಗಳನ್ನು ಚಳಿಗಾಲದ ಅಧಿವೇಶನದಲ್ಲಿ ಮುಕ್ತವಾಗಿ ಹೇಳಬಹುದು. ಪುಟ್ಟ ಮಗುವಿನ ತಾಯಿ ಮತ್ತು ಜನಪ್ರತಿನಿಧಿ. ನನ್ನ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದೇನೆ. ಇಲ್ಲಿ ನನ್ನ ಕುಟುಂಬದವರೂ ಬಂದಿದ್ದಾರೆ. ನಾನು ಸದನದ ಒಳಗೆ ಇದ್ದಾಗ, ಮಗುವನ್ನು ಅವರೇ ನೋಡಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ನವದಂಪತಿಗಳಿಗೆ ನಿಯಮಿತ ಆರೋಗ್ಯ ತಪಾಸಣೆ; ಶಿಶು ಮರಣ ತಡೆಯಲು ವಿನೂತನ ಕ್ರಮ