Site icon Vistara News

Mizoram Election Results: ಎಂಎನ್‌ಎಫ್‌ಗೆ ಭಾರೀ ಸೋಲು, ಮಿಜೋರಾಂನಲ್ಲಿ ಇನ್ನು ಜೆಡ್‌ಪಿಎಂ ಆಡಳಿತ

MNF loose power, ZPM wins Mizoram Election Results

ಮಿಜೋರಾಂ:‌ ಎಲ್ಲರ ನಿರೀಕ್ಷೆಯನ್ನು ಮೀರಿದ ಹಾಗೂ ಎಕ್ಸಿಟ್‌ ಪೋಲ್‌ಗಳ ಸಮೀಕ್ಷೆಯನ್ನು (Exit Polls) ಸುಳ್ಳಾಗಿಸಿದ ಫಲಿತಾಂಶವನ್ನು ಮಿಜೋರಾಂ ಜನರು ನೀಡಿದ್ದಾರೆ(Mizoram Election Results). ಆಡಳಿತಾರೂಢ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್(MNF)ಗೆ ಭಾರೀ ಸೋಲುಂಟಾಗಿದ್ದು, ಪ್ರತಿಪಕ್ಷ ಝೋರಾಂ ಪೀಪಲ್ಸ್ ಮೂವ್‌ಮೆಂಟ್(ZPM) ಅಧಿಕಾರದ ಗದ್ದುಗೆಗೆ ಏರಿದೆ. ಸೋಮವಾರ ಪ್ರಕಟವಾದ ಎಲೆಕ್ಷನ್‌ ಫಲಿತಾಂಶದಲ್ಲಿ ಜೆಡ್‌ಪಿಎಂ 27, ಎಂಎನ್‌ಎಫ್ 10 ಮತ್ತು ಬಿಜೆಪಿ 2(BJP Party), ಕಾಂಗ್ರೆಸ್ 1 (Congress Party) ಸ್ಥಾನಗಳನ್ನು ಗೆದ್ದುಕೊಂಡಿವೆ. ಮಿಜೋರಾಂನಲ್ಲಿ ಒಟ್ಟು 40 ಕ್ಷೇತ್ರಗಳಿವೆ. ಈ ಮಧ್ಯೆ, ಚುನಾವಣೆಯಲ್ಲಿ ಸೋತಿರುವ ಮಿಜೋರಾಂ ಸಿಎಂ ಝೋರಮ್‌ತಂಗಾ(Zoramthanga) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಮಿಜೋರಾಂನಲ್ಲಿ ಮತ ಎಣಿಕೆ ಆರಂಭದಿಂದಲೇ ಝೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಪಕ್ಷವು (Mizoram Election Result) ಸ್ಪಷ್ಟ ಬಹುಮತದತ್ತ ಸಾಗಲಾರಂಭಿಸಿತು. ಒಟ್ಟು 40 ವಿಧಾನಸಭೆ ಕ್ಷೇತ್ರಗಳ ಪೈಕಿ ಪ್ರತಿಪಕ್ಷ ಝೆಡ್‌ಪಿಎಂ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನು ಆಡಳಿತಾರೂಢ ಎಂಎನ್‌ಎಫ್‌ 9, ಕಾಂಗ್ರೆಸ್‌ 2 ಹಾಗೂ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು. ಅಂತಿಮವಾಗಿ ಜೆಡ್‌ಪಿಎಂ ಅತಿದೊಡ್ಡ ಗೆಲುವು ಸಾಧಿಸಿತು.

ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಮತ್ತು ಜಾರ್ಖಂಡ ರಾಜ್ಯಗಳ ಜತೆಗೆ ಭಾನುವವಾರ(ಡಿ.3) ಮಿಜೋರಾಂ ಎಲೆಕ್ಷನ್ ರಿಸಲ್ಟ್ ಪ್ರಕಟವಾಗಬೇಕಿತ್ತು. ಆದರೆ, ಕ್ರೈಸ್ತರೇ ಹೆಚ್ಚಿರುವ ಮಿಜೋರಾಂನಲ್ಲಿ ಮತ ಎಣಿಕೆಯನ್ನು ಭಾನುವಾರದಿಂದ ಸೋಮವಾರಕ್ಕೆ ಮುಂದೂಡುವಂತೆ ಭಾರೀ ಮನವಿಗಳು ಬಂದಿದ್ದವು. ಅಂತಿಮವಾಗಿ ಚುನಾವಣಾ ಆಯೋಗವು ಮತ ಎಣಿಕೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತ್ತು.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಕಾಂಗ್ರೆಸ್‌, ಮಿಜೋರಾಂನಲ್ಲೂ ಹಿನ್ನಡೆ ಅನುಭವಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ ಈಗ 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇನ್ನು ಕಳೆದ ಬಾರಿ ಒಂದೇ ಕ್ಷೇತ್ರ ಗೆದ್ದಿದ್ದ ಬಿಜೆಪಿ ಈಗ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ 21 ಮ್ಯಾಜಿಕ್‌ ನಂಬರ್‌ ಆಗಿದ್ದು, ಇದನ್ನು ಝೆಪಿಎಂ ಸುಲಭವಾಗಿ ದಾಟಿದೆ.

ಜೆಡ್‌ಪಿಎಂ ಮುಖ್ಯಸ್ಥ ಲಾಲದುಹೋಮಾ ಅವರು ಸೆರ್ಚಿಪ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಮಿಜೋರಾಂ ಮುಖ್ಯಮಂತ್ರಿಯಾಗಲಿದ್ದಾರೆ. ಈಗಾಗಲೇ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಮತ್ತೊಂದೆಡೆ, ಎಂಎನ್‌ಪಿ ನಾಯಕ, ಆರೋಗ್ಯ ಸಚಿವ ಆರ್‌ ಲಾಲ್ತಾಂಗ್ಲಿಯಾನಾ ಅವರು ಸೋಲು ಕಂಡಿದ್ದಾರೆ. ಮತ್ತೊಂದೆಡೆ ಸಿಎಂ ಝೋರಮ್‌ತಂಗಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

1987ರಲ್ಲಿ ಮಿಜೋರಾಂ ರಾಜ್ಯ ರಚನೆಯಾದಾಗಿನಿಂದಲೂ ಕಾಂಗ್ರೆಸ್ ಹಾಗೂ ಮಿಜೋ ನ್ಯಾಷನಲ್ ಫ್ರಂಟ್ ಸರ್ಕಾರವನ್ನು ಮಾಡುತ್ತಾ ಬಂದಿವೆ. ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಿ 1998ರಲ್ಲಿ ಎಂಎನ್‌ಪಿಯ ಝೋರಮ್‌ತಂಗಾ ಅವರು ಮುಖ್ಯಮಂತ್ರಿಯಾದರು. 2008, 2013ರಲ್ಲಿ ಕಾಂಗ್ರೆಸ್ ಗೆಲ್ಲೋವರೆಗೂ ಎಂಎನ್‌ಪಿ ಆಡಳಿತದಲ್ಲಿತ್ತು. 2018ರಲ್ಲಿ ಎಂಎನ್‌ಪಿ ಮತ್ತೆ ಅಧಿಕಾರಕ್ಕೆ ಬಂತು. ಈಗ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ತಮ್ಮ ಪ್ರದರ್ಶನ ತೋರುವಲ್ಲಿ ವಿಫಲವಾಗಿವೆ. ಮಧ್ಯ ಪ್ರದೇಶವೊಂದನ್ನು ಹೊರತುಪಡಿಸಿ, ರಾಜಸ್ಥಾನ, ಜಾರ್ಖಂಡ್, ಮಿಜೋರಾಂ, ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಗೆ ಸರ್ಕಾರಗಳು ಕೊಚ್ಚಿಕೊಂಡು ಹೋಗಿವೆ.

ಈ ಸುದ್ದಿಯನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!

Exit mobile version