Site icon Vistara News

ವಿವಿ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡಿದ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ; ಐವರಿಗೆ ಗಾಯ

Gujarat Hostel

Mob Attacks Foreign Students Over Namaz Inside Gujarat Hostel, 5 Injured

ಗಾಂಧಿನಗರ: ಗುಜರಾತ್‌ ವಿಶ್ವವಿದ್ಯಾಲಯದ (Gujarat University) ಹಾಸ್ಟೆಲ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳು ನಮಾಜ್‌ ಮಾಡಿದ್ದು, ಇವರ ಮೇಲೆ ಹಿಂದು ಸಂಘಟನೆಗಳ ಕಾರ್ಯಕರ್ತರು (Hindu Workers) ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಿಂದು ಸಂಘಟನೆಗಳ ಕಾರ್ಯಕರ್ತರ ದಾಳಿಯಲ್ಲಿ ಐವರು ವಿದ್ಯಾರ್ಥಿಗಳೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಾಸ್ಟೆಲ್‌ ಆವರಣದಲ್ಲಿ (Gujrat Hostel) ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ರಂಜಾನ್‌ ಹಿನ್ನೆಲೆಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಶನಿವಾರ ಸಂಜೆ (ಮಾರ್ಚ್‌ 16) ನಮಾಜ್‌ (Taraweeh) ಮಾಡಿದ್ದಾರೆ. ನಮಾಜ್‌ ಮಾಡಿದವರು ಅಫಘಾನಿಸ್ತಾನ ಸೇರಿ ಹಲವು ದೇಶಗಳ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಈ ಸುದ್ದಿ ತಿಳಿಯುತ್ತಲೇ ಉದ್ರಿಕ್ತ ಗುಂಪೊಂದು ದೊಣ್ಣೆ, ಚಾಕುವಿನಿಂದ ಹಾಸ್ಟೆಲ್‌ಗೆ ನುಗ್ಗಿದೆ. ಹಾಸ್ಟೆಲ್‌ ನುಗ್ಗಿದ ಗುಂಪಿನ ಸದಸ್ಯರು ಐವರೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಸ್ಟೆಲ್‌ ಸೆಕ್ಯುರಿಟಿ ಗಾರ್ಡ್‌ ಅವರನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

“ನಾವು ಹಾಸ್ಟೆಲ್‌ನಲ್ಲಿ ಓದುತ್ತ ಕುಳಿತಿದ್ದೆವು. ಇದೇ ವೇಳೆ ಒಂದಷ್ಟು ಜನರ ಗುಂಪು ನಮ್ಮ ಹಾಸ್ಟೆಲ್‌ಗೆ ನುಗ್ಗಿ, ನಮ್ಮ ಮೇಲೆ ದಾಳಿ ನಡೆಸಿತು. ಹಾಸ್ಟೆಲ್‌ ಕೋಣೆಗಳಿಗೇ ನುಗ್ಗಿ ಹಲ್ಲೆ ನಡೆಸಿತು. ದಾಳಿ ವೇಳೆ ನಮ್ಮನ್ನು ಯಾರೂ ರಕ್ಷಿಸಲಿಲ್ಲ. ದಾಳಿಯ ವೇಳೆ ಅವರು ಹಲವು ಘೋಷಣೆಗಳನ್ನು ಕೂಗಿದರು. ನಮ್ಮ ಲ್ಯಾಪ್‌ಟಾಪ್‌, ಫೋನ್‌ಗಳು, ಬೈಕ್‌ಗಳನ್ನು ಅವರು ಧ್ವಂಸಗೊಳಿಸಿದ್ದಾರೆ. ಘಟನೆ ನಡೆದ ಅರ್ಧ ಗಂಟೆ ಬಳಿಕ ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿದರು. ಅಷ್ಟೊತ್ತಿಗಾಗಲೇ ದಾಳಿ ಮಾಡಿದವರು ಪರಾರಿಯಾಗಿದ್ದರು” ಎಂದು ಹಲ್ಲೆಗೀಡಾದ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ.

ಇದನ್ನೂ ಓದಿ: Fraud Case: ಕಾಲೇಜು ಸೀಟು ಕೊಡಿಸುವುದಾಗಿ 100ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ವಂಚನೆ

ದಾಳಿಗೊಳಗಾದ ಐವರಲ್ಲಿ ಅಫಘಾನಿಸ್ತಾನ, ಶ್ರೀಲಂಕಾ ಹಾಗೂ ತುರ್ಕ್‌ಮೇನಿಸ್ತಾನದ ತಲಾ ಒಬ್ಬರು ಹಾಗೂ ಇಬ್ಬರು ಆಫ್ರಿಕನ್‌ ದೇಶದವರು ಎಂದು ತಿಳಿದುಬಂದಿದೆ. ದಾಳಿ ಮಾಡಿದವರು ಯಾವ ಸಂಘಟನೆಗೆ ಸೇರಿದವರು ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ದಾಳಿಯಿಂದಾಗಿ ಗುಜರಾತ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಹಾಗೂ ವಿವಿ ಹಾಸ್ಟೆಲ್‌ನಲ್ಲಿ ತಂಗಿರುವ ವಿದ್ಯಾರ್ಥಿಗಳಿಗೆ ಭಯ ಉಂಟಾಗಿದೆ. ವಿದೇಶಿ ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. ಪ್ರಕರಣದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version