Site icon Vistara News

Madrasa: ಬಕ್ರೀದ್‌ ಹಿನ್ನೆಲೆ ಮದರಸಾದಲ್ಲೇ ಗೋವುಗಳ ಬಲಿ; ನೂರಾರು ಹಿಂದುಗಳಿಂದ ದಾಳಿ, ಸೆಕ್ಷನ್‌ 144 ಜಾರಿ!

Madrasa

Mob attacks madrasa in Telangana over alleged animal sacrifice, several injured

ಹೈದರಾಬಾದ್:‌ ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿರುವ (Medak District) ಮದರಸಾವೊಂದರಲ್ಲಿ (Madrasa) ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂಬ ಕಾರಣಕ್ಕಾಗಿ ನೂರಾರು ಜನ ಮದರಸಾ ಮೇಲೆ ದಾಳಿ ನಡೆಸಿದ್ದಾರೆ. ಮದರಸಾದಲ್ಲಿ ಬಕ್ರೀದ್‌ ಹಬ್ಬದ (Bakrid) ಹಬ್ಬದ ಹಿನ್ನೆಲೆಯಲ್ಲಿ ಗೋವುಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಡುತ್ತಲೇ ನೂರಾರ ಹಿಂದುಗಳು ಮದರಸಾ ಮೇಲೆ ದಾಳಿ ನಡೆಸಿದ್ದಾರೆ. ಮದರಸಾ ಆಡಳಿತ ಮಂಡಳಿ ಸಿಬ್ಬಂದಿ ಮೇಲೆ ಹಲ್ಲೆ, ಪೀಠೋಪಕರಣಗಳು, ಅಲ್ಲಿದ್ದ ವಾಹನಗಳನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮೇಡಕ್‌ ಜಿಲ್ಲೆಯಲ್ಲಿರುವ ಮಿನ್ಹಾಜ್‌ ಉಲ್‌ ಉಲೂಮ್‌ ಮದ್ರಸಾದಲ್ಲಿ ಶನಿವಾರ ರಾತ್ರಿ (ಜೂನ್‌ 15) ಗೋವುಗಳ ವಧೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಡಿದೆ. ಹಿಂದು ಸಂಘಟನೆಗಳ ನೂರಾರು ಕಾರ್ಯಕರ್ತರು ದೊಣ್ಣೆ ಸೇರಿ ಹಲವು ಮಾರಕಾಸ್ತ್ರಗಳಿಂದ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ. ಹಿಂದುಗಳು ದಾಳಿ ನಡೆಸುತ್ತಲೇ ಮುಸ್ಲಿಮರು ಕೂಡ ಕಲ್ಲುತೂರಾಟದ ಮೂಲಕ ಪ್ರತಿದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಹಿಂದುಗಳು ಹಾಗೂ ಮುಸ್ಲಿಮರು ಗಾಯಗೊಂಡಿದ್ದಾರೆ. ಗಾಯಗೊಂಡ ಕೆಲ ಮುಸ್ಲಿಮರನ್ನು ಪ್ರಿನ್ಸೆಸ್‌ ಎಸ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದಷ್ಟು ಜನ ಆಸ್ಪತ್ರೆ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರೋರಾತ್ರಿ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮದರಸಾ ಸುತ್ತಮುತ್ತಲೂ ಸೆಕ್ಷನ್‌ 144 ಜಾರಿಗೊಳಿಸಿದ್ದಾರೆ. ಹಲವು ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮದರಸಾ ಮೇಲೆ ನಡೆದ ದಾಳಿಯನ್ನು ಎಐಎಂಐಎಂ ಶಾಸಕ ಕೆ. ಕೌಸರ್‌ ಮಹಿಯುದ್ದೀನ್‌ ಖಂಡಿಸಿದ್ದಾರೆ. “ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಿಂದು ವಾಹಿನಿ ಸಂಘಟನೆಗಳ ಸಾವಿರಾರು ಜನರು ಮದರಸಾ ಮೇಲೆ ದಾಳಿ ನಡೆಸಿ, ಆಡಳಿತ ಮಂಡಳಿಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಮದರಸಾದಲ್ಲಿದ್ದ ಹಲವು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ, ಆಸ್ಪತ್ರೆಗೂ ಬಂದು ಇವರು ಗಲಾಟೆ ಮಾಡಿದ್ದಾರೆ. ಇದು ಖಂಡನೀಯವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋಮಾಂಸ ಅಕ್ರಮ ವ್ಯಾಪಾರ ನಡೆಸುತ್ತಿದ್ದ 11 ಮುಸ್ಲಿಮರ ಮನೆ ಕೆಡವಿದ ಪೊಲೀಸರು; 150 ಹಸುಗಳ ರಕ್ಷಣೆ

Exit mobile version