Site icon Vistara News

Video: ಕೇರಳ ರೋಡ್ ಶೋ ವೇಳೆ ಪ್ರಧಾನಿ ಮೋದಿಯತ್ತ ತೂರಿಬಂತು ಮೊಬೈಲ್; ಚುರುಕು ಕಣ್ಣಿನ ಎಸ್​ಪಿಜಿ ಕಮಾಂಡೋ​ ಮಾಡಿದ್ದೇನು?

Mobile flung towards PM Modi during Kerala Road Show what happened next

#image_title

ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಹಿಂದೆ ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದರು. ಅಲ್ಲಿ ದೊಡ್ಡ ಮಟ್ಟದ, ಅದ್ಧೂರಿ ಎನ್ನಿಸುವ ರೋಡ್ ಶೋ ನಡೆಸಿದ್ದಾರೆ. ಬುಲೆಟ್​ ಪ್ರೂಫ್​ ಕಾರಿನಿಂದ ಕೆಳಗೆ ಇಳಿದು, ನೆರೆದಿದ್ದ ಜನರ ಮಧ್ಯ ಹೆಜ್ಜೆ ಹಾಕಿದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ, ಅಕ್ಕಪಕ್ಕ ನಿಂತಿದ್ದವರೆಲ್ಲ ಹೂಮಳೆ ಸುರಿಸಿದ್ದಾರೆ. ಪ್ರಧಾನಿ ಮೋದಿಯವರು ಸಾಗುತ್ತಿದ್ದ ರಸ್ತೆಯ ಅಕ್ಕಪಕ್ಕ ಬೇಲಿಯನ್ನು ಹಾಕಲಾಗಿತ್ತು. ಅವರ ಬೆನ್ನಹಿಂದೆ, ಎಡಬಲದಲ್ಲೆಲ್ಲ ವಿಶೇಷ ರಕ್ಷಣಾ ತಂಡದ ಸಿಬ್ಬಂದಿ (Special Protection Group-SPG) ಇದ್ದರು. ಮೋದಿಯವರು ಕಾಲ್ನಡಿಗೆಯಲ್ಲಿ ಹೊರಟಿದ್ದರಿಂದ ಭದ್ರತೆ ಇನ್ನಷ್ಟು ಕಠಿಣವಾಗಿತ್ತು. ಅದನ್ನು ಎಸ್​ಪಿಜಿಯವರು ವಿಶೇಷ ಕಾಳಜಿಯಿಂದ ನಿರ್ವಹಣೆ ಮಾಡುತ್ತಿದ್ದರು.

ಹೀಗಿರುವಾಗ ಸಣ್ಣದೊಂದು ಎಡವಟ್ಟು ಆಗಿಹೋಯಿತು. ಅಭಿಮಾನಿಯೊಬ್ಬ ಭಯಂಕರ ಉತ್ಸಾಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಡೆಗೆ ಹೂವಿನ ಎಸಳುಗಳನ್ನು ಎಸೆದಿದ್ದಾನೆ. ಆದರೆ ಈ ರಭಸಕ್ಕೆ ಅವನ ಕೈಯಲ್ಲಿದ್ದ ಮೊಬೈಲ್​ ಫೋನ್​ ಕೂಡ ಪ್ರಧಾನಿ ನರೇಂದ್ರ ಮೋದಿಯವರತ್ತ ತೂರಿಬಂತು. ಆದರೆ ಅದು ಮೋದಿಯವರವರೆಗೆ ಬರಲು ಪಕ್ಕದಲ್ಲಿದ್ದ ಎಸ್​ಪಿಜಿ ಕಮಾಂಡೋ ಬಿಡಲಿಲ್ಲ. ಆ ಕಮಾಂಡೋ ನೇರವಾಗಿ ಹೋಗುತ್ತಿದ್ದರು. ಮೊಬೈಲ್ ಅವರ ಕಾಲಿನ ಭಾಗಕ್ಕೆ ಬಂದಿದೆ. ಆದರೂ ಕಮಾಂಡೋ ಅದನ್ನು ಕೈ ಹಾಕಿ ತಡೆದಿದ್ದಾರೆ. ಆಗ ಕೆಳಗೆ ಬಿದ್ದ ಮೊಬೈಲ್​​ನ್ನು ಕಾಲಿನಿಂದ ನೂಕಿ, ಹಾಗೇ, ಪ್ರಧಾನಿಯವರೆಡೆಗೆ ಒಮ್ಮೆ ದೃಷ್ಟಿ ಹಾಯಿಸಿ ಮುಂದೆ ಸಾಗಿದ್ದಾರೆ. ಇತ್ತ ನರೇಂದ್ರ ಮೋದಿಯವರಿಗೆ ಅದು ಬಾಧಿಸಲೂ ಇಲ್ಲ. ಅಲ್ಲಿನ ಸನ್ನಿವೇಶ ಸ್ವಲ್ಪವೂ ಹದಗೆಡಲಿಲ್ಲ. ಪ್ರಧಾನಿ ತಮ್ಮ ಪಾಡಿಗೆ ರೋಡ್​ ಶೋ ಮುಂದುವರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದ್ದು, ನೆಟ್ಟಿಗರು ಎಸ್​ಪಿಜಿ ಕಮಾಂಡೋ ಅವರನ್ನು ಶ್ಲಾಘಿಸುತ್ತಿದ್ದಾರೆ. ಅವರು ಅಲರ್ಟ್ ಆಗಿರುವ ಪರಿಗೆ ಸೆಲ್ಯೂಟ್ ಎಂದಿದ್ದಾರೆ.

ಮೊಬೈಲ್​ ತೂರಿ ಬಂದ ಈ ಘಟನೆಯನ್ನು ಭದ್ರತಾ ಸಿಬ್ಬಂದಿ ಸುಲಭವಾಗಿ ಬಿಡಲಿಲ್ಲ. ಅಲ್ಲೇ ಇದ್ದ ಪೊಲೀಸರು ಆ ಮೊಬೈಲ್​ ಎತ್ತಿಟ್ಟುಕೊಂಡಿದ್ದರು. ಅದು ಯಾರದ್ದೆಂದು ಪತ್ತೆ ಹಚ್ಚಿದ ಬಳಿಕ ಅವನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆತ ತಾನು ಉದ್ದೇಶಪೂರ್ವಕವಾಗಿ ಎಸೆದಿದ್ದಲ್ಲ, ಹೂವನ್ನು ಹಾಕುವ ಭರದಲ್ಲಿ ಕೈಯಿಂದ ತೂರಿಕೊಂಡು ಹೋಯಿತು ಎಂದು ಹೇಳಿದ್ದಾನೆ. ಆತ ಮುಗ್ಧ, ಇನ್ನೇನೂ ಉದ್ದೇಶ ಇರಲಿಲ್ಲ ಎಂದು ಸಾಬೀತಾದ ಬಳಿಕವಷ್ಟೇ ಮೊಬೈಲ್ ವಾಪಸ್ ಕೊಟ್ಟು ಕಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 24ಕ್ಕೆ ಕೇರಳಕ್ಕೆ ಆಗಮಿಸಿ, ಅಂದು ರೋಡ್​ ಶೋ ನಡೆಸಿದ್ದರು. 25ರಂದು ತಿರುವನಂತಪುರಂನಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್ ರೈಲು ಮತ್ತು ಕೊಚ್ಚಿಯಲ್ಲಿ ವಾಟರ್​ ಮೆಟ್ರೋ ಉದ್ಘಾಟನೆ ಮಾಡಿದ್ದಾರೆ.

Exit mobile version