ಫ್ಯಾಶನ್ ಶೋ ವೇದಿಕೆ ಮೇಲೆ ರ್‍ಯಾಂಪ್ ವಾಕ್ (Ramp Walk) ಮಾಡುತ್ತಿದ್ದ 24ವರ್ಷದ ರೂಪದರ್ಶಿ ಅಲ್ಲೇ, ಸ್ಥಳದಲ್ಲೇ ಮೃತಪಟ್ಟಿದ್ದಾರೆ (Model dies in Noida). ಜತೆಗೆ ಇದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ. ನೊಯ್ಡಾ ಫಿಲ್ಮ್ ಸಿಟಿ ಏರಿಯಾದಲ್ಲೇ ಇರುವ ಸ್ಟುಡಿಯೊವೊಂದರಲ್ಲಿ ಈ ಫ್ಯಾಶನ್ ಶೋ ನಡೆಯುತ್ತಿತ್ತು. ಕನಸು ಕಂಗಳ, ಸುಂದರ ರೂಪದರ್ಶಿ ವಯ್ಯಾರ ಮಾಡುತ್ತ, ನವಿರಾಗಿ ಹೆಜ್ಜೆ ಹಾಕುತ್ತ ವೇದಿಕೆ ಮೇಲೆ ನಡೆಯುತ್ತಿದ್ದಳು. ಆದರೆ ದುರ್ವಿಧಿ ಅಲ್ಲೇ ವೇದಿಕೆಯಲ್ಲೇ ಇತ್ತು. ಸ್ಟುಡಿಯೋದಲ್ಲಿ ಲೈಟ್ ಅಳವಡಿಸಲು ಹಾಕಿದ್ದ ಕಬ್ಬಿಣದ ಕಂಬ ಆ ರೂಪದರ್ಶಿ ಮೇಲೆಯೇ ಬಿದ್ದಿದೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ವಿಷಯ ತಿಳಿದು ಕೂಡಲೇ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಗಾಯಗೊಂಡವನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಾಡೆಲ್ ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ.
ಮೃತಳಾದ ಮಾಡೆಲ್ ಹೆಸರು ವಂಶಿಕಾ ಚೋಪ್ರಾ. ಗಾಯಗೊಂಡವನ ಹೆಸರು ಬಾಬಿ ರಾಜ್. ಭಾನುವಾರ ಮಧ್ಯಾಹ್ನ ನೊಯ್ಡಾ ಫಿಲ್ಮ್ ಸಿಟಿ ಏರಿಯಾದಲ್ಲಿರುವ ಲಕ್ಷ್ಮೀ ಸ್ಟುಡಿಯೋದಲ್ಲಿ ಫ್ಯಾಶನ್ ಶೋ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ವಂಶಿಕಾ ಮತ್ತು ಬಾಬಿ ರಾಜ್ ಪಾಲ್ಗೊಂಡು, ವೇದಿಕೆ ಮೇಲೆ ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫ್ಯಾಶನ್ ಶೋದ ಆಯೋಜಕರನ್ನು ಮತ್ತು ಸ್ಟುಡಿಯೋದಲ್ಲಿ ಆ ಕಬ್ಬಿಣದ ಕಂಬವನ್ನು ಅಳವಡಿಸಿದವರನ್ನು ಸೇರಿ ಒಟ್ಟು ನಾಲ್ವರನ್ನು ಬಂಧಿಸಿರುವ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ’ಈ ಕಂಬವನ್ನು ಕೇವಲ ಬೆಳಕಿನ ವ್ಯವಸ್ಥೆಗಾಗಿ ಒಂದೆಡೆ ಇಡಲಾಗಿತ್ತು. ನೆಲದೊಳಗೆ ಹೂತಿರಲಿಲ್ಲ. ಯಾವುದೇ ಆಧಾರವೂ ಕಂಬಕ್ಕೆ ಇರಲಿಲ್ಲ. ಹಾಗೇ, ಮೃತ ಮಾಡೆಲ್ ಕುಟುಂಬಕ್ಕೆ ಮತ್ತು ಗಾಯಗೊಂಡ ಯುವಕನ ಮನೆಯವರಿಗೆ ವಿಷಯ ತಿಳಿಸಿದ್ದಾಗಿಯೂ’ ಪೊಲೀಸರು ಮಾಹಿತಿ ನೀಡಿದ್ದಾರೆ. ಫ್ಯಾಶನ್ ಶೋ ನಡೆಸಲು ಸಂಬಂಧಪಟ್ಟವರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Viral Video: ಫ್ಯಾಶನ್ ಶೋದಲ್ಲಿ ಮಾಡೆಲ್ ಮೈಮೇಲಿದ್ದ ಜಾಕೆಟ್ ತೆಗೆದುಹಾಕಿದ ರೋಬೋಟ್; ಇಷ್ಟವಾಗಿಲ್ಲವೆಂದ ನೆಟ್ಟಿಗರು