ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ಅವರ ಅಂತ್ಯ ಸಂಸ್ಕಾರದ ಬಳಿಕ ಗುಜರಾತ್ ರಾಜಭವನಕ್ಕೆ ತೆರಳಿದ್ದು, ಇಂದು ನಿಗದಿಯಾಗಿದ್ದ ಪಶ್ಚಿಮ ಬಂಗಾಳದ ಅಭಿವೃದ್ಧಿ ಯೋಜನೆಗಳಿಗೆ (Heeraben Modi) ಆನ್‌ಲೈನ್ ಮೂಲಕ ಚಾಲನೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಶುಕ್ರವಾರ ಮುಂಜಾನೆ ಸುಮಾರು 3.30ರ ವೇಳೆಗೆ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬಳಿಕ ಮಗನಾಗಿ ತಾಯಿಯ ಅಂತ್ಯಕ್ರಿಯೆಯ ವಿಧಿ ವಿಧಾನಗಳಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಸುಮಾರು 10.30 ರ ವೇಳೆಗೆ ಎಂದಿನಂತೆ ಪ್ರಧಾನಿಯಾಗಿ ಕರ್ತವ್ಯನಿರ್ವಹಣೆಗೆ ತೊಡಗಿಸಿದರು.
ತಾಯಿಯ ಅಗಲಿಕೆಯ ದುಃಖದ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ದೇಶ ಸೇವೆಯ ಕರ್ತವ್ಯನಿರ್ವಹಣೆಗೆ ಲೋಪವಾಗದಂತೆ ನಡೆದುಕೊಂಡಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಲ್ಲಿ ಇಂದು ಬೆಳಗ್ಗೆ 11.15ರಿಂದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದಿತ್ತು. ಆದರೆ ತಾಯಿ ಹೀರಾಬೆನ್ ಅವರ ನಿಧನದ ಕಾರಣದಿಂದ ಖುದ್ದಾಗಿ ಪಶ್ಚಿಮ ಬಂಗಾಳಕ್ಕೆ ತೆರಳಲು ಅವರಿಗೆ ಸಾಧ್ಯವಾಗದಿದ್ದರೂ, ಗುಜರಾತ್‌ನಲ್ಲಿ ರಾಜ್ ಭವನದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಎಂದಿನಂತೆ ಅಭಿವೃದ್ಧಿ ಯೋಜನೆಗಳು ಚಾಲನೆಯಾಗಲಿವೆ.
ಹೌರಾದಿಂದ ನ್ಯೂ ಜಲಪಾಯ್‌ಗುರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ, ಕೋಲ್ಕೊತಾ ಮೆಟ್ರೊದ ವಿಸ್ತರಣೆ ಮಾರ್ಗಕ್ಕೆ ಹಸಿರು ನಿಶಾನೆ, ಸ್ವಚ್ಛ ಗಂಗಾ ಯೋಜನೆಯ ಉದ್ಘಾಟನೆ, ರಾಷ್ಟ್ರೀಯ ಗಂಗಾ ಕೌನ್ಸಿಲ್‌ನ ಸಭೆ ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಆನ್‌ಲೈನ್ ಮೂಲಕ ಚಾಲನೆ ನೀಡಲಿದ್ದಾರೆ.
ಪ್ರಧಾನಮಂತ್ರಿಯವರ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿದೆ.