Site icon Vistara News

Modi birthday | ವಡ್ನಗರ್‌ನ ಬೀದಿಯಿಂದ ಜನರ ಹೃದಯದ ಗಾದಿಯವರೆಗೆ: ಇದು ಮೋದಿ ಸಾಗಿದ ಹಾದಿ

pm narendra Modi Varanasi road show

1990ರ ದಶಕದಲ್ಲಿ ಕೆಲವರು ಒಂದು ಮಾತು ಹೇಳುತ್ತಿದ್ದರು. ಅವರ ಮಾತಿಗೆ ಮೂಲವಾಗಿದ್ದದ್ದು ನಾಸ್ಟ್ರಡಾಮಸ್‌ನ ಭವಿಷ್ಯ. ಆ ಮಾತು ಏನೆಂದರೆ: ಭಾರತದಲ್ಲೊಂದು ಹೊಸ ಕ್ರಾಂತಿಯನ್ನು ಸೃಷ್ಟಿಸುವ ನಾಯಕ ಎಮರ್ಜ್‌ ಆಗಲಿದ್ದಾನೆ. ಆಗ ಭಾರತದ ಚರಿತ್ರೆಯಲ್ಲೇ ಕ್ರಾಂತಿ ಕಿಡಿ ಹಚ್ಚಿದ್ದ ಇಂದಿರಾ ಗಾಂಧಿ ಅವರು ನಿರ್ಗಮಿಸಿದ್ದರು. ಹೊಸ ಯೋಚನೆಗಳನ್ನು ತಲೆಯಲ್ಲಿ ಹೊತ್ತಿದ್ದ ರಾಜೀವ್‌ ಗಾಂಧಿ ಅವರೂ ಇರಲಿಲ್ಲ. ಹಾಗಿದ್ದರೆ ಯಾರು? ಯಾರು? ಎನ್ನುವ ಪ್ರಶ್ನೆ ಎದ್ದು ನಿಂತಿತ್ತು. ಒಂದು ದೇಶದ ದಿಕ್ಕು ದೆಸೆಯನ್ನೇ ಬದಲಿಸಬಲ್ಲ ಪ್ರಬಲ ನಾಯಕ ಅದ್ಯಾರು ಎನ್ನುವುದು ಗೊತ್ತಾಗಲು 2014ರ ಮೇ 26 ಬರಬೇಕಾಯಿತು! ಹೌದು, ಆವತ್ತು ಒಬ್ಬ ಡೈನಾಮಿಕ್‌, ನಿರ್ಧಾರಕ ಶಕ್ತಿಯುಳ್ಳ, ಅದಕ್ಕಿಂತಲೂ ಹೆಚ್ಚಾಗಿ ಭಾರತ ಮತ್ತೆ ಜಗತ್ತಿನ ಸರ್ವ ಶಕ್ತ ರಾಷ್ಟ್ರವಾಗುವ ಕಡೆಗೆ ದಿಟ್ಟ ಹೆಜ್ಜೆ ಇಡಬಹುದು ಎಂಬ ಭರವಸೆ ಮೂಡಿಸಬಲ್ಲ ನಾಯಕ ದೇಶದ ಚುಕ್ಕಾಣಿ ಹಿಡಿದಿದ್ದ. ಆ ನಾಯಕನ ಹೆಸರೇ ನರೇಂದ್ರ ದಾಮೋದರ ದಾಸ್‌ ಮೋದಿ.
ನಿಜವೆಂದರೆ, 2014ರ ಆ ವೇಳೆಗೇ ಈ ಮಾತನ್ನು ಹೇಳಿದ್ದರೆ ಯಾರೂ ಒಪ್ಪುತ್ತಿರಲಿಲ್ಲ. ಯಾಕೆಂದರೆ, ನರೇಂದ್ರ ಮೋದಿ ಅವರು ನಾವು ಕಂಡ ಪ್ರಬಲ, ಸರ್ವ ಜನಾದರಣೀಯ ಅಟಲ್‌ ಬಿಹಾರಿಯವರ ಹಾಗೆ ಅಜಾತಶತ್ರು ರಾಜಕಾರಣಿಯಾಗಿರಲಿಲ್ಲ. ಎಲ್‌.ಕೆ. ಆಡ್ವಾಣಿಯವರಂತೆ ಅಕಳಂಕ ಚರಿತರೂ ಆಗಿರಲಿಲ್ಲ. 13 ವರ್ಷಗಳ ಕಾಲ ಗುಜರಾತನ್ನು ಆಳಿದ್ದರೂ, ಗುಜರಾತನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ್ದರೂ ಅಭಿವೃದ್ಧಿಯ ಹರಿಕಾರನ ಹಿಂದೊಂದು ರಕ್ತಚರಿತೆಯ ಕಥಾನಕವೊಂದು ರೂಪುಗೊಂಡಿತ್ತು. ಹೀಗಾಗಿ ಅತ್ಯಂತ ಹೆಚ್ಚು ಟೀಕೆಗೆ, ಅಪಮಾನಕ್ಕೆ, ಆಕ್ರೋಶಕ್ಕೆ ಒಳಗಾದ ನಾಯಕರ ಪಟ್ಟಿಯಲ್ಲಿ ಮೋದಿ ಹೆಸರು ಮುಂಚೂಣಿಯಲ್ಲಿತ್ತು.

ಅಮೆರಿಕ ಮೊದಲಾದ ದೇಶಗಳೇ ನಮ್ಮ ನೆಲಕ್ಕೆ ನಿಮಗೆ ಪ್ರವೇಶವಿಲ್ಲ ಎಂದು ಸಾರಿ ಹೇಳಿದ್ದವು. ದೇಶದ ಒಳಗೇ ಅಘೋಷಿತ ನಿರ್ಬಂಧದ ಕರಿಛಾಯೆಗಳು ಅಡರಿದ್ದವು. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸದೆ, ಯಾವ ಅಪಮಾನಗಳಿಗೂ ಜಗ್ಗದೆ ಸಿಂಹದಂತೆ ತಲೆ ಎತ್ತಿ ನಡೆಯುತ್ತಲೇ ಹೋದರು ಮೋದಿ. ಈಗ ಎಂಟು ವರ್ಷಗಳ ಬಳಿಕ ಅನಾದರಿಸಿದವರೇ ಆದರಿಸುವ, ಅಗೌರವಿಸಿದರೇ ನಮಸ್ಕರಿಸುವ, ಬೇಡ ಎಂದವರೇ ಬಾ ಎನ್ನುವ, ಜಗತ್ತೇ ನಮಗೆ ಬೇಕಿರುವುದು ಇಂಥ ನಾಯಕ ಎಂದು ತಲೆಬಾಗುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ ಮೋದಿ. ದೇಶದ ಮೂಲೆ ಮೂಲೆಗಳಲ್ಲಿ, ಜಗತ್ತಿನ ಸರ್ವ ರಾಷ್ಟ್ರಗಳಲ್ಲಿ ಈ ಪರಿಯ ಪ್ರೀತಿಯನ್ನು ಅನುಭವಿಸುವ ಮತ್ತೊಬ್ಬ ರಾಜಕಾರಣಿಯನ್ನು ನಾವು ಚರಿತ್ರೆಯಲ್ಲಿ ಯಾವತ್ತು ನೋಡಿಲ್ಲ… ಒಬ್ಬ ಮಹಾತ್ಮಾ ಗಾಂಧಿಯನ್ನು ಬಿಟ್ಟು.

ಇವತ್ತು ಮೋದಿ ಜಗತ್ತನ್ನೇ ಗೆಲ್ಲಲು ಹೊರಟು ನಿಂತಿರುವ ನಾಯಕನಾಗಿರಬಬಹುದು. ಆದರೆ, 72 ವರ್ಷಗಳ ಹಿಂದೆ ಅವರು ಹುಟ್ಟಿದ್ದು ಒಬ್ಬ‌ ಸಾಮಾನ್ಯ ಮನೆಯಲ್ಲಿ. ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್ನಗರ್‌ನ ಬೀದಿಯಲ್ಲಿರುವ ಕೇವಲ 40X12 ಅಡಿ ವಿಸ್ತೀರ್ಣದ ಪುಟ್ಟ ಗೂಡಲ್ಲಿ. ಬದುಕಿಗಾಗಿ ಚಹಾ ಮಾರುತ್ತಿದ್ದ ಕುಟುಂಬವದು. ನರೇಂದ್ರ ಕೂಡಾ ಸ್ಕೂಲು ಬಿಟ್ಟ ಮೇಲೆ ಚಹಾ ಮಾರುತ್ತಿದ್ದವರೇ. ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ಮತ್ತು ಶಾಲೆ ಹಂತದಲ್ಲೇ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಹುಮ್ಮಸ್ಸು. ಜತೆಗೆ ಈಜುವುದರಲ್ಲೂ ಹುಮ್ಮಸ್ಸು. ಮುಂದೆ ಅವರು ಜೀವನಯಾನದಲ್ಲಿ ಈಜಲು, ಗಟ್ಟಿಯಾಗಲು ಆವತ್ತೇ ತಳಪಾಯ ಸೃಷ್ಟಿಯಾಗಿತ್ತು ಅನಿಸುತ್ತದೆ.

ಬಾಲ್ಯದಲ್ಲೂ ಅಷ್ಟೆ ನರೇಂದ್ರ ಎಲ್ಲ ಮಕ್ಕಳ ಹಾಗಿರಲಿಲ್ಲ. ಸಮಾಜದಲ್ಲೊಂದು ಬದಲಾವಣೆ ಮಾಡಬೇಕು ಎನ್ನುವ ತುಡಿತ ಬಾಲ್ಯದಲ್ಲೇ ಇತ್ತು ಎನ್ನುವುದನ್ನು ಆವರ ಸಹಪಾಠಿಗಳು ನೆನಪಿಸಿಕೊಳ್ಳುತ್ತಾರೆ. ಆಗ ಅವರ ಮೇಲೆ ದೊಡ್ಡ ಪ್ರಭಾವವನ್ನು ಬೀರಿದವರು ಸ್ವಾಮೀ ವಿವೇಕಾನಂದರು. ಅಧ್ಯಾತ್ಮಿಕ ಪಯಣಕ್ಕೆ ಮುನ್ನುಡಿ ಬರೆದಿದ್ದೇ ವಿವೇಕಾನಂದರ ಬದುಕು. ಬಹುಶಃ ಭಾರತವನ್ನು ವಿಶ್ವ ಗುರು ಮಾಡಬೇಕು ಎನ್ನುವ ಕನಸು ಆಗಲೇ ಮೊಳಕೆಯೊಡೆದಿತ್ತಾ? ಗೊತ್ತಿಲ್ಲ.
ಕೇವಲ 17ನೇ ವಯಸ್ಸಿನಲ್ಲಿ ಭಾರತ ಸುತ್ತುವ ಕನಸಿನೊಂದಿಗೆ ಮನೆಯನ್ನು ಬಿಟ್ಟು ಹೊರಟಿದ್ದರು. ಎರಡು ವರ್ಷ ಇಡೀ ದೇಶದ ಬೇರೆ ಬೇರೆ ಭಾಗಗಳನ್ನು ಸುತ್ತಿಕೊಂಡು, ಬೇರೆ ಬೇರೆ ಸಂಸ್ಕೃತಿಗಳನ್ನು ಅರಿತುಕೊಂಡು ಮರಳಿ ಬಂದಾಗ ಅವರು ಬೇರೆಯೇ ಮನುಷ್ಯನಾಗಿದ್ದರು. ಅಷ್ಟು ಹೊತ್ತಿಗೆ ಅವರಿಗೆ ಬದುಕಿನ ಗುರಿ ಏನು ಎನ್ನುವುದು ಸ್ಪಷ್ಟವಾಗಿದೆ.

ಅವರು ಅಹಮದಾಬಾದ್‌ಗೆ ಹೋಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಂಡರು. 1972ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಆರೆಸ್ಸೆಸ್‌ ಪ್ರಚಾರಕರಾಗಿ ಸೇವೆ ಶುರು ಮಾಡಿದ ಬಳಿಕ ಅವರ ಬದುಕು ಇನ್ನಷ್ಟು ಬದಲಾಯಿತು. ಬೆಳಗ್ಗೆ ಐದು ಗಂಟೆಗೆ ಎದ್ದು ಕೆಲಸ ಶುರು ಮಾಡಿದರೆ ಅದು ಅಂತ್ಯವಾಗುತ್ತಿದ್ದುದು ಮಧ್ಯರಾತ್ರಿಯ ಎಷ್ಟೋ ಜಾವಕ್ಕೆ. ಅದರಲ್ಲೂ 1970ರ ದಶಕದ ಅಂತ್ಯ ಭಾಗದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ ಅವರ ಗುರಿಗೊಂದು ಸ್ಪಷ್ಟತೆಯನ್ನು ನೀಡಿತು.

1980ರ ಹೊತ್ತಿಗೆ ಅವರು ಸಂಘದೊಳಗೆ ಒಬ್ಬ ಪ್ರಬಲ ಸಂಘಟಕನಾಗಿ ಎದ್ದು ಬಂದಿದ್ದರು. ನಾನಾ ಜವಾಬ್ದಾರಿಗಳನ್ನು ನಿಭಾಯಿಸಿ ಎಲ್ಲರ ಗಮನ ಸೆಳೆದಿದ್ದರು. ಇದೇ ಕಾರಣಕ್ಕಾಗಿ 1987ರಲ್ಲಿ ಅವರನ್ನು ಗುಜರಾತ್‌ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅವರಿಗೆ ದೊರೆತ ಮೊದಲ ಟಾಸ್ಕೇ ಅಹಮದಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು. ಅದನ್ನು ಸಾಧಿಸಿದರು. 1990ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಕಟ್ಟಿ ನಿಲ್ಲಿಸಿದರು.

ಇದೆಲ್ಲವೂ ನಿಜಾರ್ಥದಲ್ಲಿ ಯಶಸ್ವಿಯಾಗಿದ್ದು 1995ರಲ್ಲಿ ನಡೆದ ಗುಜರಾತ್‌ ಚುನಾವಣೆಯಲ್ಲಿ. ಆಗ ಬಿಜೆಪಿ ರಾಜ್ಯ ವಿಧಾನಸಭೆಯ 200 ಸ್ಥಾನಗಳ ಪೈಕಿ 121ನ್ನು ಗೆದ್ದಿತ್ತು. ಮುಂದೆ 1995ರಲ್ಲೇ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಜವಾಬ್ದಾರಿಗಳನ್ನು ನಿಭಾಯಿಸಿದರು. 1998ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಧಿಕ ಸ್ಥಾನಗಳನ್ನು ಗೆಲ್ಲಿಸಿಕೊಂಡರು. 2001ರ ಸೆಪ್ಟೆಂಬರ್‌ನಲ್ಲಿ ಆಗ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಬಂದ ಒಂದು ಫೋನ್‌ ಕರೆ ಅವರ ಬದುಕನ್ನು ಹೊಸ ದಿಕ್ಕಿಗೆ ಹೊರಳಿಸಿತ್ತು. ಪ್ರಚಾರಕರಾಗಿ, ಸಂಘಟಕರಾಗಿ ಗಮನ ಸೆಳೆದಿದ್ದ ಮೋದಿಯೊಳಗಿನ ಆಡಳಿತಗಾರನಿಗೆ ಮೊದಲ ಬಾರಿ ಮಣೆ ಸಿಕ್ಕಿತ್ತು. ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ನೇಮಿಸಲ್ಪಟ್ಟಿದ್ದರು.

ನಿಜವಾದ ನರೇಂದ್ರ ಮೋದಿ ಹೊರಹೊಮ್ಮಿದ್ದೇ ಒಬ್ಬ ಆಡಳಿತಗಾರನಲ್ಲಿ. ಅವರ ಕನಸುಗಳು, ಕ್ರಾಂತಿ ಮಾಡಬೇಕೆಂಬ ಹುಮ್ಮಸ್ಸುಗಳು, ಛಲಗಳೆಲ್ಲವೂ ಮೂರ್ತಿವೆತ್ತು ಗುಜರಾತ್‌ನಲ್ಲಿ ಬದಲಾವಣೆಯ ಹೊಸ ಗಾಳಿ ಬೀಸಲು ಶುರು ಮಾಡಿತು. ನಿಜವೆಂದರೆ ಮೋದಿ ಅಲ್ಲಿವರೆಗೆ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ಆಗಿರಲಿಲ್ಲ. ನೇರವಾಗಿ ಹೋಗಿ ಕುಳಿತಿದ್ದೇ ಮುಖ್ಯಮಂತ್ರಿ ಗಾದಿಯಲ್ಲಿ. ಮೊದಲ ದಿನದಿಂದಲೇ ಕೆಲಸ ಶುರು. ನೂರು ದಿನ, 200 ದಿನ ಹೀಗೆ ಗುರಿಗಳನ್ನು ನಿಗದಿಪಡಿಸಿಕೊಳ್ಳುತ್ತಲೇ ವೈಬ್ರಂಟ್‌ ಗುಜರಾತ್‌ ರೂಪುಗೊಳ್ಳಲು ಕಾರಣವಾಯಿತು. ʻಮಿನಿಮಮ್‌ ಗವರ್ನಮೆಂಟ್‌, ಮ್ಯಾಕ್ಸಿಮಮ್‌ ಗವರ್ನೆನ್ಸ್‌ʼ ಎಂಬ ಪವರ್‌ಫುಲ್‌ ಮಂತ್ರ ಹುಟ್ಟಿದ್ದೇ ಅಲ್ಲಿ.

ನಿಜವೆಂದರೆ 2014ರ ಲೋಕಸಭಾ ಚುನಾವಣೆಗೆ ಮುನ್ನ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದಾಗಲೂ ವಿರೋಧಿಗಳು ಎತ್ತಿದ ಎರಡು ಪ್ರಶ್ನೆಗಳು: ಗುಜರಾತ್‌ನಲ್ಲಿ ಮಾಡಿದ ರಾಜಕಾರಣ, ಭಯ ನಿರ್ಮಾಣ ಇಡೀ ದೇಶದಲ್ಲಿ ನಡೆಯಲ್ಲ. ಎರಡನೆಯದು, ಅವರಿಗೆ ದೇಶವನ್ನು ಆಳುವವರಿಗೆ ಬೇಕಾದ ಆಡಳಿತದ ಜ್ಞಾನವೇ ಇಲ್ಲ. ಈ ಎರಡೂ ಪ್ರಶ್ನೆಗಳನ್ನು ಮೋದಿ ಅವರು ಮೀರಿ ಬೆಳೆದು ಎಷ್ಟೋ ಕಾಲವಾಗಿದೆ. ಯಾವ ರಾಜಕಾರಣದ ಪಟ್ಟುಗಳ ಬಗ್ಗೆ ವಿರೋಧಿಗಳು ಮಾತನಾಡುತ್ತಿದ್ದರೋ ಆ ಎಲ್ಲ ಪಟ್ಟುಗಳನ್ನು ಮಣ್ಣು ಮುಕ್ಕಿಸುವ ಹೊಸ ಪಟ್ಟುಗಳನ್ನು ಮೋದಿ ಪ್ರಯೋಗ ಮಾಡುತ್ತಿದ್ದಾರೆ. ರಾಜಕಾರಣದ ಜತೆ ಅಭಿವೃದ್ಧಿಯ ಹೊಸ ಮಂತ್ರಗಳು ಮೊಳಗುತ್ತಿವೆ. ಇದೆಲ್ಲವೂ ಸಾಧ್ಯವಾಗಿದ್ದು ಕಠಿಣ ಪರಿಶ್ರಮ, ದೂರದೃಷ್ಟಿ ಮತ್ತು ಧೈರ್ಯದಿಂದಲೇ.

ಇದನ್ನೂ ಓದಿ | Modi Birthday | ಗುಜರಾತ್‌ನಿಂದ ದಿಲ್ಲಿಯ ತನಕ, ಪ್ರಧಾನ ಸೇವಕನ ಜೈತ್ರಯಾತ್ರೆ, ಅಮೋಘ ಚರಿತ್ರೆ

Exit mobile version