ನರೇಂದ್ರ ಮೋದಿ (Narendra Modi) ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಬಗ್ಗೆ ಅಷ್ಟೇನೂ ಪುಸ್ತಕಗಳು ಪ್ರಕಟವಾಗಿರಲಿಲ್ಲ. ಆದರೆ, ಪ್ರಧಾನಿಯಾದ ಎರಡೇ ತಿಂಗಳಲ್ಲಿ ಅವರ ಕುರಿತು 40 ಪುಸ್ತಕಗಳು ಪ್ರಕಟವಾದವು! ಈಗಲೂ ಅವರ ಸಾಧನೆ ಆಧರಿಸಿ, ಅವರ ಜೀವನ ಕತೆಯಾಧರಿಸಿ ಪುಸ್ತಕಗಳು ಪ್ರಕಟವಾಗುತ್ತಲೇ ಇವೆ. ಇದೇ ಮಾತನ್ನು ನಾವು ಸಿನಿಮಾ ನಿರ್ಮಾಣ ಬಗ್ಗೆ ಹೇಳುವಂತಿಲ್ಲ. ಆದರೆ, ಅವರು ಕೆಲವು ಸಿನಿಮಾಗಳ ಬಗ್ಗೆಒಳ್ಳೆಯ ಮಾತುಗಳನ್ನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಆ ಬಳಿಕ ಕೆಲವು ಚಿತ್ರ ನಿರ್ಮಾಪಕರು ಅವರ ಜೀವನಗಾಥೆಯ ಬಗ್ಗೆ ಆಸಕ್ತಿಯನ್ನು ತಳೆದರು. ನಿರ್ದೇಶಕ ಓಮುಂಗ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ‘ಪಿಎಂ ನರೇಂದ್ರ ಮೋದಿ(PM Narendra Modi)’ ಸಿನಿಮಾವನ್ನು ಪ್ರಕಟಿಸಿದರು ಮತ್ತು 2019ರಲ್ಲಿ ಈ ಸಿನಿಮಾ ಬಿಡುಗಡೆಯಾಯಿತು. ಪ್ರಧಾನಿ ನೇರಂದ್ರ ಮೋದಿ ಅವರ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರು ನಟಿಸಿದ್ದಾರೆ. ವಿವೇಕ್ ತಂದೆ ಸುರೇಶ್ ಒಬೆರಾಯ್ ಅವರು ಚಿತ್ರದ ನಿರ್ಮಾಪಕರ ಪೈಕಿ ಒಬ್ಬರು.
ಭಾರೀ ವಿವಾದವಾಗಿತ್ತು
2019ರ ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯ ಕಾವು ಜೋರಾಗಿತ್ತು. ಇದೇ ಸಂದರ್ಭದಲ್ಲಿ ನಿರ್ಮಾಪಕರು ಪಿಎಂ ನರೇಂದ್ರ ಮೋದಿ ಸಿನಿಮಾ ಬಿಡುಗಡೆಗೆ ಮುಂದಾದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಮಧ್ಯೆ ಒಣ ರಗಳೆಗೂ ಕಾರಣವಾಯಿತು. ಪಿಎಂ ನರೇಂದ್ರ ಮೋದಿ ಸಿನಿಮಾ ಮತದಾರರಿಗೆ ಆಮಿಷ ಒಡ್ಡಬಹುದು ಎಂಬ ಆರೋಪ ಕೇಳಿ ಬಂತು. ಹಾಗಾಗಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಸಿನಿಮಾಗೆ ಬಿಡುಗಡೆಯ ಭಾಗ್ಯ ಸಿಗಲಿಲ್ಲ. ಫಲಿತಾಂಶ ಪ್ರಕಟವಾದ ಮಾರನೇ ದಿನ ಅಂದರೆ 2019 ಮೇ 24ರಂದು ಸಿನಿಮಾ ಬಿಡುಗಡೆಯಾಯಿತು.
ಬಿಡುಗಡೆ ಮುನ್ನ ಭಾರೀ ಸದ್ದಿಗೆ ಕಾರಣವಾಗಿದ್ದ ಪಿಎಂ ನರೇಂದ್ರ ಮೋದಿ ಸಿನಿಮಾ, ಬಿಡುಗಡೆಯ ಬಳಿಕ ಅಷ್ಟೇನೂ ಸದ್ದು ಮಾಡಲಿಲ್ಲ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆಯೂ ಸಿಗಲಿಲ್ಲ. 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಹಿಂದಿ ಭಾಷೆಯ ಚಿತ್ರವು ತನ್ನ ಲೈಫ್ ಟೈಮ್‌ನಲ್ಲಿ 28 ಕೋಟಿ ರೂ. ಗಳಿಕೆ ಮಾಡಿದೆ.
ಸ್ಫೂರ್ತಿಯಾದರು ಮೋದಿ
ಬಹುಶಃ ಸಂಪೂರ್ಣವಾಗಿ ಮೋದಿ ಅವರನ್ನು ಕೇಂದ್ರವಾಗಿಟ್ಟು ಈವರೆಗೆ ಅಷ್ಟೇನೂ ಚಿತ್ರಗಳ ಬಂದಿಲ್ಲ. ಆದರೆ, ಕೆಲವು ಸಿನಿಮಾಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಕೆಲವು ಪಾತ್ರಗಳನ್ನು ಅವರನ್ನು ಹೋಲುತ್ತವೆ. ಹಾಗಾಗಿ, ಮೋದಿ ಅವರಿಗೂ ಸಿನಿಮಾ ರಂಗಕ್ಕೂ ನಂಟಿದೆ ಎದು ಹೇಳಬಹುದು.
ಮೋದಿ ಸಿನಿಮಾ ನೋಡ್ತಾರಾ?
ನರೇಂದ್ರ ಮೋದಿ ಅವರು ಹಳೆಯ ಅಥವಾ ಹೊಸ ಕಾಲದ ಸಿನಿಮಾ ನೋಡಿದ ಬಗ್ಗೆ ನಿಖರವಾದ ಮಾಹಿತಿ ಏನೂ ಇಲ್ಲ. ಆದರೆ, ಅವರು ಪ್ರಧಾನಿಯಾದ ಬಳಿಕ ಹಲವು ಸಿನಿಮಾಗಳ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಈ ಪೈಕಿ ದಿ ಕಾಶ್ಮೀರ್ ಫೈಲ್ಸ್, ತೆಲುಗು ಸಿನಿಮಾ ಬಾಹುಬಲಿ ಸಿನಿಮಾಗಳನ್ನು ಹೆಸರಿಸಬಹುದು. ಹಾಗೆಯೇ ಚಿತ್ರರಂಗದ ಬಗ್ಗೆಯೂ ಅವರಿಗೆ ಪ್ರೀತಿ. ಹಿಂದಿ ಭಾಷೆ ಸೇರಿದಂತೆ ಭಾರತೀಯ ಎಲ್ಲ ಭಾಷಾ ಚಿತ್ರರಂಗದ ನಟ-ನಟಿಯರನ್ನು ಅವರ ಭೇಟಿಯಾಗುತ್ತಾರೆ, ಅವರ ಬಗ್ಗೆ ಪರಿಚಯವನ್ನು ಹೊಂದಿದ್ದಾರೆ.
ಇದನ್ನೂ ಓದಿ | Modi Birthday | ಬಂಡಿ ಕೋಟ್‌ಗೆ ನರೇಂದ್ರ ಮೋದಿ ಹೆಸರು ಸೇರಿದ್ದು ಹೇಗೆ?