ನವ ದೆಹಲಿ: ಶ್ರೀಲಂಕಾದಲ್ಲಿ ಸ್ಥಾಪನೆಯಾಗಲಿರುವ ವಿದ್ಯುತ್ ಯೋಜನೆಯೊಂದನ್ನು ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ಸ್‌ಗೇ ನೀಡಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡ ಹಾಕಿದ್ದಾರೆ ಎಂಬ ಅಲ್ಲಿನ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ ಬಿರುಗಾಳಿ ಎಬ್ಬಿಸಿದೆ. ಆದರೆ, ಈ ಅಧಿಕಾರಿಯೇ ಇದೀಗ ತಮ್ಮ ಹೇಳಿಕೆಯನ್ನು ಹಿಂದೆ ಪಡೆದಿದ್ದಾರೆ. ಜತೆಗೆ ಶ್ರೀಲಂಕಾದ ಅಧ್ಯಕ್ಷ ಗೊಟಬೊಯಾ ರಾಜಪಕ್ಸ ಕೂಡಾ ಇಂಥ ಯಾವ ಒತ್ತಡವೂ ಇಲ್ಲ ಎಂದು ಹೇಳಿದ್ದಾರೆ.
ಶ್ರೀಲಂಕಾದ ಉತ್ತರ ಮನ್ನಾರ್ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ 500 ಮೆಗಾ ವ್ಯಾಟ್ ಸಾಮರ್ಥ್ಯದ ನವೀಕರಿಸಬಲ್ಲ ವಿದ್ಯುತ್ ಮೂಲಗಳ ಯೋಜನೆಯನ್ನು ಗೌತಮ್ ಅದಾನಿ ಅವರ ಕಂಪನಿಗೇ ಕೊಡಬೇಕು ಎಂದು ತನ್ನ ಮೇಲೆ ಭಾರಿ ಒತ್ತಡವಿದೆ ಎಂದು ಅಧ್ಯಕ್ಷ ರಾಜಪಕ್ಸ ತನ್ನ ಮುಂದೆ ಹೇಳಿಕೊಂಡಿದ್ದಾರೆ ಎಂದು ಶ್ರೀಲಂಕಾದ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್‌ನ ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ಅವರು ಹೇಳಿದ್ದರು. ಕೊಲಂಬೊದಲ್ಲಿ ಸಂಸದೀಯ ಮಂಡಳಿಯೊಂದರ ಮುಂದೆ ಶುಕ್ರವಾರ ನೀಡಿದ ಈ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು.
ರಾಜಪಕ್ಸ ಅವರು ಈ ಯೋಜನೆಯನ್ನು ಅದಾನಿ ಅವರಿಗೇ ನೀಡುವಂತೆ ತಿಳಿಸಿದರು ಎಂದು ಸಭೆಯಲ್ಲಿ ಹೇಳಿದ್ದರೆನ್ನಲಾಗಿದೆ. ಅಧ್ಯಕ್ಷರು ಫರ್ಡಿನಾಂಡೋ ಅವರನ್ನು ಕರೆಸಿಕೊಂಡು ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.
ಲಂಕಾ ನಿರಾಕರಣೆ
ಫರ್ಡಿನಾಂಡೋ ಅವರ ಹೇಳಿಕೆ ಬಿರುಗಾಳಿ ಎಬ್ಬಿಸುತ್ತಿದ್ದಂತೆಯೇ ಸ್ವತಃ ಅಧ್ಯಕ್ಷ ಗೊಟಬೊಯಾ ರಾಜಪಕ್ಸ ಅವರು ಟ್ವಿಟರ್‌ನಲ್ಲಿ ಹೇಳಿಕೆಯನ್ನು ನೀಡಿ, ಮನ್ನಾರ್ ಪವನ ವಿದ್ಯುತ್ ಯೋಜನೆಯನ್ನು ನಿರ್ದಿಷ್ಟ ವ್ಯಕ್ತಿ ಇಲ್ಲವೇ ಕಂಪನಿಗೆ ನೀಡುವಂತೆ ತಮ್ಮ ಮೇಲೆ ಯಾರೂ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಈ ಸಂಬಂಧ ಅಧಿಕೃತ ಹೇಳಿಕೆಯನ್ನು ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಬಳಿಕ ಅಧಿಕೃತ ಹೇಳಿಕೆಯನ್ನೂ ಬಿಡುಗಡೆ ಮಾಡಲಾಯಿತು.
ʻʻಪ್ರಸ್ತುತ ದೇಶದಲ್ಲಿ ಭಾರಿ ಪ್ರಮಾಣದ ವಿದ್ಯುತ್ ಕೊರತೆ ಇದೆ. ಅದನ್ನು ತುಂಬಿಕೊಳ್ಳುವುದಕ್ಕೆ ಮೆಗಾ ವಿದ್ಯುತ್ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಜಾರಿಗೊಳಿಸಬೇಕು ಎಂದು ಅಧ್ಯಕ್ಷರು ಬಯಸಿದ್ದಾರೆ. ಆದರೆ, ಯೋಜನೆಗಳನ್ನು ನೀಡುವಾಗ ಯಾವುದೇ ಅನಗತ್ಯ ಒತ್ತಡಕ್ಕೆ ಒಳಗಾಗಬಾರದು ಎಂದು ಸೂಚಿಸಿದ್ದಾರೆ. ದೇಶದಲ್ಲಿ ದೊಡ್ಡ ಪ್ರಮಾಣದ ವಿದ್ಯುತ್ ಯೋಜನೆಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಆದರೆ, ಇವುಗಳ ಅನುಷ್ಠಾನದಲ್ಲಿ ದೇಶದ ಪಾರದರ್ಶಕ ಮತ್ತು ಉತ್ತರದಾಯಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧ್ಯಕ್ಷರು ಸೂಚಿಸಿದ್ದಾರೆʼ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ವಿದಾಯ
ದೇಶದ ಪ್ರಮುಖ ವಿದ್ಯುತ್ ಯೋಜನೆಗಳ ಗುತ್ತಿಗೆಯನ್ನು ನೀಡು ವಿಚಾರದಲ್ಲಿ ಲಂಕಾ ಸರಕಾರ ನಿಯಮಾವಳಿಗಳನ್ನು ಬದಲಾಯಿಸಿ, ಸ್ಪರ್ಧಾತ್ಮಕ ಬಿಡ್ಡಿಂಗ್‌ನ್ನು ರದ್ದುಪಡಿಸಿತ್ತು. ಈ ಬೆಳವಣಿಗೆ ನಡೆದ ಎರಡೇ ದಿನದಲ್ಲಿ ಅದಾನಿ ಒತ್ತಡದ ಆರೋಪ ಕೇಳಿಬಂದಿದೆ. ಈ ಬಗ್ಗೆ ಅದಾನಿ ಗ್ರೂಪ್ ಅಥವಾ ಭಾರತ ಸರಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಲಂಕಾದಲ್ಲಿ ಹೆಚ್ಚುತ್ತಿದೆ ಅದಾನಿ ಪಾರಮ್ಯ
ಈ ವಿವಾದದ ಸತ್ಯಾಸತ್ಯತೆ ಏನೇ ಇದ್ದರೂ ದ್ವೀಪ ರಾಷ್ಟ್ರದಲ್ಲಿ ಅದಾನಿ ಗ್ರೂಪ್‌ನ ಪ್ರಾಬಲ್ಯ ದಿನೇ ದಿನೇ ಹೆಚ್ಚುತ್ತಿರುವುದು ಮಾತ್ರ ಸತ್ಯವಾಗಿದೆ. ಕಳೆದ ವರ್ಷ ಕೊಲಂಬೊ ಬಂದರಿನಲ್ಲಿ ಪಶ್ಚಿಮ ಕಂಟೈನರ್ ಟರ್ಮಿನಲ್ ಸ್ಥಾಪನೆಯ ಗುತ್ತಿಗೆಯನ್ನು ಅದಾನಿ ಗ್ರೂಪ್ ಪಡೆದಿದೆ. ಇದೊಂದು ಆಯಕಟ್ಟಿನ ಪ್ರಮುಖ ಬಂದರು ಕೆಲಸವಾಗಿದ್ದು, ಶೇಕಡಾ 51 ಪಾಲುದಾರಿಕೆಯನ್ನು ಅದಾನಿ ಗ್ರೂಪ್ ಹೊಂದಿದೆ. ಇದರ ಜತೆಗೇ ಕಳೆದ ಮಾರ್ಚ್‌ನಲ್ಲಿ ಮನ್ನಾರ್ ಮತ್ತು ಪೂಣೆರಿನ್ ವಿದ್ಯುತ್ ಯೋಜನೆಗಳೂ ಅದಾನಿ ಗ್ರೂಪ್ ಪಾಲಾಗಿವೆ.
ಇತ್ತ ಲಂಕಾದ ವಿರೋಧ ಪಕ್ಷಗಳು ʻರಾಜಪಕ್ಸ ಸರಕಾರವು ಮೋದಿ ಅವರ ಗೆಳೆಯರು ಹಿಂಬಾಗಿಲಿನಿಂದ ಲಂಕಾ ಪ್ರವೇಶಿಸಲು ದಾರಿ ಮಾಡಿಕೊಡುತ್ತಿದ್ದಾರೆ” ಎಂದು ಆರೋಪಿಸಿವೆ.
ರಾಹುಲ್ ಗಾಂಧಿ ಹೇಳಿದ್ದೇನು?
ಲಂಕಾದ ಅಧಿಕಾರಿಯ ಹೇಳಿಕೆ ಭಾರತದಲ್ಲಿ ರಾಜಕೀಯ ವಾಗ್ದಾಳಿಗೂ ಕಾರಣವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ʻʻಬಿಜೆಪಿಯ ಸ್ವಜನಪಕ್ಷಪಾತ ಪಾಕ್ ಜಲಸಂಧಿಯನ್ನು ದಾಟಿ ಶ್ರೀಲಂಕಾಕ್ಕೂ ವಿಸ್ತರಿಸಿದೆ ಎಂದಿದ್ದಾರೆ.