Site icon Vistara News

5-12 ವರ್ಷ ಮಕ್ಕಳಿಗೆ ಲಸಿಕೆ: ಶಾಲೆಗಳಲ್ಲಿ ವಿಶೇಷ ಅಭಿಯಾನಕ್ಕೆ ಮೋದಿ ಕರೆ

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕು ಉಲ್ಬಣವಾಗುತ್ತಿರುವ ನಡುವೆಯೇ 5-2 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅನುಮದಿ ದೊರಕಿದ್ದು, ಶಾಲೆಗಳಲ್ಲಿ ಈ ಬಗ್ಗೆ ವಿಶೇಷ ಅಭಿಯಾನಗಳನ್ನು ಆಯೋಜನೆ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಬುಧವಾರ ಕರೆ ನೀಡಿದರು.

ಕೊರೋನಾ ಪರಿಸ್ಥಿತಿ ಅವಲೋಕನಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆಇನ ವಿಡಿಯೋ ಕಾನ್ಫರೆನ್ಸ್‌ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅನೇಕ ಸಮಯದ ನಂತರ ದೇಶದಲ್ಲಿ ಶಾಲೆಗಳು ಆರಂಭವಾಗಿವೆ. ಮಕ್ಕಳಿಗೆ ಸೋಂಕು ಹರಡಬಹುದು ಎಂಬ ಚಿಂತೆ ಪೋಷಕರಿಗೆ ಶುರುವಾಗಿದೆ. ಕೆಲವೆಡೆ ಮಕ್ಕಳು ಸೋಂಕಿಗೊಳಗಾಗದ ವರದಿಗಳೂ ಇವೆ. ಆದರೆ ಸಾಕಷ್ಟು ಮಕ್ಕಳಿಗೂ ಲಸಿಕೆ ಸಿಕ್ಕಿರುವುದು ಸಂತಸ. ಇದೀಗ 5-12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಬಹುದು ಎಂಬುದಕ್ಕೆ ನಿನ್ನೆಯಷ್ಟೆ ಅನುಮತಿ ಸಿಕ್ಕಿದೆ. ಎಲ್ಲ ಅರ್ಹ ಮಕ್ಕಳಿಗೆ ಬೇಗನೆ ಲಸಿಕೆ ನೀಡುವುದು ನಮ್ಮ ಪ್ರಾಥಮಿಕ ಆದ್ಯತೆಯಾಗಲಿ. ಇದಕ್ಕಾಗಿ ಶಾಲೆಗಳಲ್ಲಿ ವಿಶೇಷ ಅಭಿಯಾನ ನಡೆಸಬೇಕಿದೆ. ಶಿಕ್ಷಕರು ಹಾಗೂ ಪೋಷಕರು ಇದರ ಕುರಿತು ಜಾಗೃತರಾಗಬೇಕು. ದೇಶದ ಎಲ್ಲ ವಯಸ್ಕರಿಗೆ ಮೂರನೇ ಡೋಸ್‌ ಸಹ ಲಭ್ಯವಿದೆ. ಶಿಕ್ಷಕರು, ಪೋಷಕರು ಸೇರಿ ಎಲ್ಲ ಅರ್ಹರೂ ಈ ಮುಂಜಾಗ್ರತಾ ಲಸಿಕೆ ಪಡೆದುಕೊಳ್ಳಬೇಕು ಎಂದರು.

ಇದನ್ನೂ ಓದಿ | Explainer: ಏನಿದು ಕೋವಿಡ್‌ R Value? ಇದೇಕೆ ಮುಖ್ಯ?

ಮೂರನೇ ಅಲೆಯಲ್ಲಿ ನಾವು ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣ ಕಂಡಿದ್ದೇವೆ. ಆದರೆ ಇದನ್ನು ನಾವು ಸಫಲವಾಗಿ ನಿರ್ವಹಣೆ ಮಾಡಿದ್ದೇವೆ. ಇದೇ ಮಾರ್ಗವನ್ನು ನಾವು ಮುಂದುವರಿಸಬೇಕಿದೆ. ನಮ್ಮ ತಜ್ಞರು ಎಲ್ಲ ಪರಿಸ್ಥಿತಿಯನ್ನೂ ಅವಲೋಕಿಸುತ್ತಿದ್ದಾರೆ. ಮುಂಚೆಯೇ ಸೋಂಕನ್ನು ತಡೆಯುವ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುವ ನಿರ್ಧಾರ ಮಾಡಬೇಕು. ಟ್ರೇಸ್‌, ಟ್ರಾಕ್‌, ಟ್ರೀಟ್‌ ಮಾರ್ಗವನ್ನು ನಾವು ಅನುಸರಿಸಬೇಕಿದೆ.

ರೂಪಾಂತರಿ ತಳಿಗಳ ಕುರಿತು ಜಾಗರೂಕರಾಗಿರಬೇಕು ಎನ್ನುವುದನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದವರಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿ ಅದರ ಮಾದರಿಯನ್ನು ಜಿನೋಮ್‌ ಪರೀಕ್ಷೆಗೆ ಕಳಿಸಬೇಕು. ಇದರಿಂದ ರೂಪಾಂತರಿಗಳ ಮಾಹಿತಿ ಲಭಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕರಾಗಿರಬೇಕು. ಆದರೆ ಎಲ್ಲಿಯೂ ಭಯವನ್ನು ಸೃಷ್ಟಿಸಬಾರದು ಎಂದು ತಿಳಿಸಿದರು.

ಕೊರೋನಾ ಸಮಯದಲ್ಲಿ ಅನೇಕ ವೈದ್ಯಕೀಯ ಮೂಲಸೌಕರ್ಯಗಳು ಉತ್ತಮಗೊಂಡಿವೆಯಾದರೂ ತುರ್ತು ಪರಿಸ್ಥಿತಿ ವೇಳೆ ಅವುಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಲಿ ಎಂದು ತಿಳಿಸಿದರು. “ಆರೋಗ್ಯ ಮೂಲಸೌಕರ್ಯ ವೃದ್ಧಿಸುವ ಕಾರ್ಯ ವೇಗವಾಗಿ ನಡೆಯಬೇಕು. ಹಾಸಿಗೆ, ವೆಂಟಿಲೇಟರ್‌, ಪಿಎಸ್‌ಎ ಆಕ್ಸಿಜನ್‌ ಘಟಕ ಸ್ಥಿತಿಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದರೂ ಈ ಎಲ್ಲ ಸೌಲಭ್ಯಗಳೆಲ್ಲವೂ ಸಮಯದಲ್ಲಿ ಲಭ್ಯವಾಗಿರುವಂತೆ ಸಿದ್ಧವಾಗಿರಬೇಕು. ಯಾವುದೇ ಕೊರತೆ ಇದ್ದರೂ ಮೇಲ್ಮಟ್ಟದಿಂದ ಪರಿಶೀಲಿಸಿ ಪೂರ್ತಿ ಮಾಡಬೇಕು” ಎಂದರು.

ಮೆಡಿಕಲ್‌ ಕಾಲೇಜ್‌, ಜಿಲ್ಲಾ ಆಸ್ಪತ್ರೆಗಳಲ್ಲಿ ಸೌಲಭ್ಯ ಹಾಗೂ ಮಾನವ ಸಂಪನ್ಮೂಲವನ್ನು ಹೆಚ್ಚಿಸಬೇಕು. ಪರಸ್ಪರ ಸಂವಾದ ಹಾಗೂ ಸಹಯೋಗದಲ್ಲಿ ಕೊರೋನಾ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಹಾಗೂ ಹೊಸ ಮಾರ್ಗ ಹುಡುಕುತ್ತೇವೆ. ಕೊ ಆಪರೇಟಿವ್‌ ಫೇಡರಲಿಸಂಗೆ ಅನುಗುಣವಾಗಿ ಭಾರತ ಕೊರೋನಾ ವಿರುದ್ಧ ಯುದ್ಧ ನಡೆಸುತ್ತಿದೆ. ವೈಶ್ವಿಕ ಕಾರಣಗಳಿಗಾಗಿ ದೇಶದ ಆಂತರಿಕ ಪರಿಸ್ಥಿತಿಗಳ ಮೇಲೆ ಆಗುವ ಪ್ರಭಾವವನ್ನು ಕೇಂದ್ರ ಹಾಗೂ ರಾಜ್ಯಗಳು ಒಟ್ಟಾಗಿ ಎದುರಿಸುತ್ತಿವೆ ಎಂದು ಶ್ಲಾಘಿಸಿದರು.

Exit mobile version