ಕರ್ನಾಟಕ ವಿಧಾನ ಸಭೆ ಚುನಾವಣೆ (Karnataka Assembly Election) ನಿಮಿತ್ತ ಇಲ್ಲಿ ನಿರಂತರವಾಗಿ ಪ್ರಚಾರ, ರೋಡ್ ಶೋ, ಸಮಾವೇಶ ನಡೆಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi)ಯವರು ಈಗ ರಾಜಸ್ಥಾನದತ್ತ ಮುಖ ಮಾಡಿದ್ದಾರೆ (PM Modi In Rajasthan). ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ (Rajasthan Assembly Election) ನಡೆಯಲಿದೆ ಮತ್ತು ಅಲ್ಲಿ ಸದ್ಯ ಕಾಂಗ್ರೆಸ್ ಆಡಳಿತವಿದೆ. ಆ ಕಾಂಗ್ರೆಸ್ ಸರ್ಕಾರದಲ್ಲೂ ಆಂತರಿಕ ಕಲಹ ಹೊಗೆಯಾಡುತ್ತಿದೆ. ಕೈ ಮುಷ್ಠಿಯಲ್ಲಿರುವ ರಾಜಸ್ಥಾನದಲ್ಲಿ ಕಮಲ ಅರಳಿಸುವ ಪ್ರಯತ್ನವನ್ನು ಬಿಜೆಪಿ ನಿಧಾನವಾಗಿ ಶುರುವಿಟ್ಟುಕೊಳ್ಳುತ್ತಿದೆ. ಅದಕ್ಕೆ ಬುನಾದಿಯೆಂಬಂತೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನಕ್ಕೆ ತೆರಳಿ ಒಟ್ಟಾರೆ 5500 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಇಂದು ರಾಜಸ್ಥಾನಕ್ಕೆ ತೆರಳಿದ ಪ್ರಧಾನಿ ಮೋದಿ ಅಲ್ಲಿನ ನಾಥದ್ವಾರ ಪಟ್ಟಣದಲ್ಲಿರುವ ಶ್ರೀನಾಥ ಜೀ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಪ್ರಧಾನಿ ಮೋದಿಯವರು ಹೀಗೆ ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿ ಎರಡೂ ಕಡೆ ಜನರು ತುಂಬಿ ಹೋಗಿದ್ದರು. ಮೋದಿಯವರು ಸಾಗುತ್ತಿದ್ದ ಕಾರಿನ ಕಡೆಗೆ ಗುಲಾಬಿ ಹೂವುಗಳ ಎಸಳುಗಳನ್ನು ಎರಚಿದ್ದಾರೆ. ಆ ರಸ್ತೆ ಮಾರ್ಗವೆಲ್ಲ ಹೂವಿನ ಎಸಳುಗಳಿಂದ ತುಂಬಿ ಹೋಗಿತ್ತು. ನರೇಂದ್ರ ಮೋದಿಯವರು ತಮ್ಮ ಕಾರಿನಲ್ಲೇ ಕುಳಿತು, ನೆರೆದಿದ್ದ ಜನರ ಕಡೆಗೆ ಕೈ ಬೀಸಿದರು.
ಸಿಎಂ ಗೆಹ್ಲೋಟ್ ಭಾಷಣಕ್ಕೆ ಎದ್ದುನಿಲ್ಲುತ್ತಿದ್ದಂತೆ ಮೋದಿ ಜಪ!
ಇಂದು ರಾಜಸ್ಥಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಕೂಡ ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಅಶೋಕ್ ಗೆಹ್ಲೋಟ್ ಅಕ್ಕಪಕ್ಕವೇ ಕುಳಿತಿದ್ದರು. ಮೊದಲು ಭಾಷಣಕ್ಕೆಂದು ಅಶೋಕ್ ಗೆಹ್ಲೋಟ್ ಡಯಾಸ್ ಬಳಿ ಹೋದರೆ, ನೆರೆದಿದ್ದ ಜನರೆಲ್ಲ ದೊಡ್ಡದಾಗಿ ‘ಮೋದಿ..ಮೋದಿ’ ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಅದೆಷ್ಟೋ ಮಂದಿ ಎದ್ದು ನಿಂತು ಮೋದಿ ನಾಮ ಜಪ ಮಾಡಿದರು. ಆಗ ಪ್ರಧಾನಿ ಮೋದಿ ವೇದಿಕೆ ಮೇಲೆ ಕುಳಿತಿದ್ದವರು, ಅಲ್ಲಿಂದಲೇ ಜನರತ್ತ ಕೈ ಮಾಡಿ, ಸುಮ್ಮನೆ ಕುಳಿತುಕೊಳ್ಳುವಂತೆ ಹೇಳಿದರು. ಆದರೆ ಗೆಹ್ಲೋಟ್ ಶುರು ಭಾಷಣ ಶುರು ಮಾಡಿದರೂ, ಜನ ಮೋದಿ ಎಂದು ಕೂಗುವುದನ್ನು ಬಿಡಲಿಲ್ಲ. ಈ ವಿಡಿಯೊ ವೈರಲ್ ಆಗಿದೆ.
ಇಂದು ರಾಜಸ್ಥಾನಕ್ಕೆ ಬಂದ ಪ್ರಧಾನಿ ಮೋದಿಯವರನ್ನು ಏರ್ಪೋರ್ಟ್ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸ್ವಾಗತಿಸಿದರು. ನಂತರ ಮೋದಿಯವರು ಉದಯಪುರ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವುದು, ಹೆದ್ದಾರಿ, ಆಸ್ಪತ್ರೆ ಸೇರಿ ಒಟ್ಟು 5500 ಕೋಟಿ ರೂ.ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಅದಾದ ಮೇಲೆ ಸಿರೋಹಿ ಜಿಲ್ಲೆಯ ಅಬು ರಸ್ತೆಯಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ರೋಡ್ ಶೋನಲ್ಲಿ ಪಾಲ್ಗೊಂಡರು. ಈ ವೇಳೆ ಕೂಡ ರಾಜಸ್ಥಾನ ಸಿಎಂ ಗೆಹ್ಲೋಟ್ ಉಪಸ್ಥಿತರಿದ್ದರು.