Site icon Vistara News

Modi Degree: ಮೋದಿ ಪದವಿ ಕೇಸ್; ಆಪ್‌ ಸಂಸದ ಸಂಜಯ್‌ ಸಿಂಗ್‌ ಅರ್ಜಿ ತಿರಸ್ಕರಿಸಿದ ಕೋರ್ಟ್

Modi Degree

Modi Degree: Supreme Court rejects AAP MP Sanjay Singh's plea to quash summons

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪದವಿ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ (AAP) ಸಂಸದ ಸಂಜಯ್‌ ಸಿಂಗ್‌ (Sanjay Singh) ಅವರಿಗೆ ಸಂಕಷ್ಟ ಎದುರಾಗಿದೆ. ಮೋದಿ ಪದವಿ ಪ್ರಮಾಣಪತ್ರ (Modi Degree) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ಸಮನ್ಸ್‌ ನೀಡಿರುವುದನ್ನು ಪ್ರಶ್ನಿಸಿ ಸಂಜಯ್‌ ಸಿಂಗ್‌ ಅವರನ್ನು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ತಳ್ಳಿಹಾಕಿದೆ. ಗುಜರಾತ್‌ ಹೈಕೋರ್ಟ್‌ (Gujarat High Court) ಸಮನ್ಸ್‌ಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅಷ್ಟೇ ಅಲ್ಲ, ಸಮನ್ಸ್‌ ಪ್ರಶ್ನಿಸಿ ಆಪ್‌ ನಾಯಕರು ಸಲ್ಲಿಸಿದ ಅರ್ಜಿಯ ಕುರಿತು ನಾಲ್ಕು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದಾಗಿ ಗುಜರಾತ್‌ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಗಡುವು ನೀಡಿದೆ.

ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ನೀಡಬೇಕು ಎಂಬುದಾಗಿ ಆರ್‌ಟಿಇ ಮುಖ್ಯ ಆಯುಕ್ತರ ಆದೇಶ ಪ್ರಶ್ನಿಸಿ ಗುಜರಾತ್‌ ವಿವಿಯು ಹೈಕೋರ್ಟ್‌ ಮೊರೆ ಹೋಗಿತ್ತು. ಆಗ, ಗುಜರಾತ್‌ ಹೈಕೋರ್ಟ್‌ ಮಾಹಿತಿ ಹಕ್ಕು ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಗುಜರಾತ್‌ ಹೈಕೋರ್ಟ್‌ ತೀರ್ಪಿನ ಬಳಿಕ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಸಂಜಯ್‌ ಸಿಂಗ್‌ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಗುಜರಾತ್‌ ವಿವಿ ರಿಜಿಸ್ಟ್ರಾರ್‌ ಪಿಯೂಷ್‌ ಪಟೇಲ್‌ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಅದರಂತೆ, ಗುಜರಾತ್‌ ಹೈಕೋರ್ಟ್‌ ಸಂಜಯ್‌ ಸಿಂಗ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಈ ಸಮನ್ಸ್‌ಗೆ ತಡೆಯಾಜ್ಞೆ ನೀಡಬೇಕು ಎಂಬುದಾಗಿ ಸಂಜಯ್‌ ಸಿಂಗ್‌ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈಗ ಸರ್ವೋಚ್ಚ ನ್ಯಾಯಾಲಯವು ಸಮನ್ಸ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಇದರಿಂದಾಗಿ, ಕೆಲವೇ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ಸಂಜಯ್‌ ಸಿಂಗ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಏನಿದು ಪಿಎಂ ಮೋದಿ ಪದವಿ ಪ್ರಕರಣ?

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ಪ್ರತಿಪಕ್ಷಗಳು ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನಿಸಲಾರಂಭಿಸಿದವು. ಆಗ, ಬಿಜೆಪಿಯು ನರೇಂದ್ರ ಮೋದಿ ಅವರು ಗುಜರಾತ್ ವಿವಿಯಿಂದ ಪದವಿ ಹಾಗೂ ದಿಲ್ಲಿ ವಿವಿಯಿಂದ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆಂದು ಹೇಳಿತ್ತು. ಅಲ್ಲದೇ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರದರ್ಶಿಸಿದ್ದರು.

ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಗಳ ಬಹಿರಂಗ ಕೋರಿ, ಮಾಹಿತಿ ಹಕ್ಕಿನ ಕಾಯ್ದೆಯಡಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಹಕ್ಕು ಆಯೋಗವು, ಅರ್ಜಿದಾರರ ಮಾಹಿತಿಯನ್ನು ಪೂರೈಸುವಂತೆ ಪಿಎಂಒ ಹಾಗೂ ವಿಶ್ವವಿದ್ಯಾಲಯಗಳಿಗೆ ಆದೇಶಿಸಿತ್ತು. ಗುಜರಾತ್ ವಿವಿಯು ಆಯೋಗ ಈ ಆದೇಶವನ್ನು ಪ್ರಶ್ನಿಸಿ ಗುಜರಾತ್‌ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಗುಜರಾತ್‌ ಹೈಕೋರ್ಟ್‌, ಮಾಹಿತಿ ಆಯೋಗದ ಆದೇಶಕ್ಕೆ ತಡೆ ನೀಡುವ ಜತೆಗೆ ಅರವಿಂದ್‌ ಕೇಜ್ರಿವಾಲ್‌ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ಇದನ್ನೂ ಓದಿ: ಮೋದಿ ಮತ್ತೆ ಪಿಎಂ ಆಗಲೆಂದು 13 ಸಾವಿರ ಅಡಿಯಿಂದ ಸ್ಕೈ ಡೈವ್‌ ಮಾಡಿದ ವಿಜಯಪುರ ಫ್ಯಾನ್ಸ್!

Exit mobile version