ನವದೆಹಲಿ: ಬಿಜೆಪಿ ನಾಯಕ, ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ಇರುವುದೇ ಹಾಗೆ. ಅವರಿಗೆ ಅನಿಸಿದ್ದನ್ನು ಹೇಳದಿದ್ದರೆ ಆಗುವುದಿಲ್ಲ. ಎದುರಿನವರು ಎಷ್ಟೇ ಪ್ರಭಾವಿಯಾಗಿರಲಿ, ಪ್ರಧಾನಿಯೇ ಆಗಿರಲಿ, ಅವರ ಬಗ್ಗೆ ಮಾತನಾಡುವುದನ್ನು, ತಪ್ಪಾದಾಗ ಕುಟುಕುವುದನ್ನು ಜಪ್ಪಯ್ಯ ಎಂದರೂ ನಿಲ್ಲಿಸುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಮೋದಿ ಅವರ ಫಾಲೋವರ್‌ಗಳಿಗೆ ಸುಬ್ರಮಣಿಯನ್ ಸ್ವಾಮಿ ಕುಟುಕಿದ್ದಾರೆ. “ಟ್ವಿಟರ್‌ನಲ್ಲಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿರುವವರು ಮೂರ್ಖರು” ಎಂದು ಜಾಡಿಸಿದ್ದಾರೆ.
“ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿರುವವರು ಮೂರ್ಖರು. ನರೇಂದ್ರ ಮೋದಿ ಅವರು ನನ್ನನ್ನು ಸಂಸದನನ್ನಾಗಿ ಮಾಡುವುದಿಲ್ಲ ಎಂದು ಫಾಲೋವರ್‌ಗಳು ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ, ಮೂರ್ಖರಿಗೆ ಇದು ಗೊತ್ತಿಲ್ಲ. ನಾನು ಈಗಾಗಲೇ ಸಂಸತ್ತನ್ನು ಆರು ಬಾರಿ ಪ್ರವೇಶಿಸಿದ್ದೇನೆ. ಮೂರು ಬಾರಿ ಲೋಕಸಭೆ ಸದಸ್ಯನಾಗಿ, ಮೂರು ಬಾರಿ ರಾಜ್ಯಸಭೆ ಸದಸ್ಯನಾಗಿದ್ದೇನೆ. ನಾನು ಮನಸ್ಸು ಮಾಡಿದರೆ ವಾರಾಣಸಿಯಿಂದಲೇ ಸ್ಪರ್ಧಿಸಿ ಏಳನೇ ಬಾರಿ ಲೋಕಸಭೆ ಪ್ರವೇಶಿಸಬಲ್ಲೆ” ಎಂದು ಟ್ವೀಟ್ ಮಾಡಿದ್ದಾರೆ. ವಾರಾಣಸಿಯು ಮೋದಿ ಅವರ ಲೋಕಸಭೆ ಕ್ಷೇತ್ರವಾಗಿದೆ.
ಸುಬ್ರಮಣಿಯನ್ ಸ್ವಾಮಿ ಟ್ವೀಟ್
Modi & Tadakka’s followers on Twitter are morons because all the they tweet is Modi will not make me MP. Morons don’t know that I have already been in Parliament six times: 3 LS and 3 RS without Modi. I can choose to go 7 th time too such as from Varanasi.
— Subramanian Swamy (@Swamy39) May 29, 2023
ಸುಬ್ರಮಣಿಯನ್ ಸ್ವಾಮಿ ಹೀಗೆ ಕಟುಕಿದ್ದೇಕೆ?
ಪ್ರಧಾನಿ ನರೇಂದ್ರ ಮೋದಿ ಅವರ ಒಂದಷ್ಟು ಅಭಿಮಾನಿಗಳು ಟ್ವಿಟರ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅವರನ್ನು ಹೀಯಾಳಿಸುವ ರೀತಿ ಟ್ವೀಟ್ ಮಾಡಿದ್ದರು. ನರೇಂದ್ರ ಮೋದಿ ಅವರು ಸುಬ್ರಮಣಿಯನ್ ಸ್ವಾಮಿ ಅವರನ್ನು ಮತ್ತೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವುದಿಲ್ಲ ಎಂದೆಲ್ಲ ಟೀಕಿಸಿದ್ದಾರೆ. ಮೋದಿ ಅವರ ಬೆಂಬಲವಿಲ್ಲದೆ ಸುಬ್ರಮಣಿಯನ್ ಸ್ವಾಮಿ ಅವರು ಸಂಸತ್ ಪ್ರವೇಶಿಸಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕಾಗಿ, ಮೋದಿ ಅಭಿಮಾನಿಗಳಿಗೆ ಸುಬ್ರಮಣಿಯನ್ ಸ್ವಾಮಿ ತಿರುಗೇಟು ನೀಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿಪಕ್ಷಗಳ ನಾಯಕರ ಜತೆಗೆ ತಮ್ಮ ಪಕ್ಷದ ನಾಯಕರ ನಡೆಗಳನ್ನೂ ಟೀಕಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಇದಕ್ಕೂ ಮೊದಲು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ಮೋದಿ ಕುರಿತು ಟೀಕಿಸಿದ ಕಾರಣದಿಂದಾಗಿ ಪ್ರಧಾನಿ ಅಭಿಮಾನಿಗಳು ಟ್ವಿಟರ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅವರನ್ನು ಕಿಚಾಯಿಸುತ್ತಿದ್ದಾರೆ.
ಇದನ್ನೂ ಓದಿ: Modi Degree Certificate: ವಿವಾದದ ಬೆನ್ನಲ್ಲೇ ಮೋದಿ ಡಿಗ್ರಿ ಸರ್ಟಿಫಿಕೇಟ್ ಬಿಡುಗಡೆ ಮಾಡಿದ ಸುಬ್ರಮಣಿಯನ್ ಸ್ವಾಮಿ