Site icon Vistara News

ಮೋದಿ ಸರಕಾರಕ್ಕೆ 8 ವರ್ಷ ಭರ್ತಿ, ಮೋದಿ-ಶಾ ಸಾರ‍ಥ್ಯದಲ್ಲಿ ಬಿಜೆಪಿಯ ಜೈತ್ರಯಾತ್ರೆ

narendra modi

ನವದೆಹಲಿ: ಭಾರತದ 14ನೇ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿ ಗುರುವಾರ 8 ವರ್ಷ ಭರ್ತಿಯಾಗುತ್ತಿದೆ. ಮೋದಿ ಸರಕಾರಕ್ಕೆ 8 ವರ್ಷ ಭರ್ತಿ ಆಗಿರುವ ಎಂಟು ವರ್ಷಗಳಲ್ಲಿ ಕಾರ್ಯಕರ್ತರ ಸಂಖ್ಯೆಯ ದೃಷ್ಟಿಯಿಂದ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರ ಸಂಘಟನಾ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ.

2014ರ ಮೇ 26ರಂದು ಪ್ರಧಾನಿಯಾದ ನರೇಂದ್ರ ಮೋದಿಯವರು 2019ರಲ್ಲಿ ಎರಡನೇ ಅವಧಿಗೆ ಪುನರಾಯ್ಕೆಯಾದರು. ಕಳೆದ ಎಂಟು ವರ್ಷಗಳಲ್ಲಿ “ವಿಕಾಸ ಪುರುಷʼರಾಗಿ, ಡಿಜಿಟಲ್‌ ತಂತ್ರಜ್ಞಾನ, ಮೂಲಸೌಕರ್ಯ ಅಭಿವೃದ್ಧಿಯ ಹರಿಕಾರರಾಗಿ, ಚಾಣಕ್ಯ ವಿದೇಶಾಂಗ ನೀತಿಯ ರೂವಾರಿಯಾಗಿ, ಕೋವಿಡ್‌ ನಿರ್ವಹಣೆಯಲ್ಲೂ ಜಗತ್ತಿನ ಗಮನ ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಸದ್ಯಕ್ಕೆ ಭಾರತೀಯ ರಾಜಕಾರಣದಲ್ಲಿ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಬ್ಬರಿಲ್ಲ ಎಂಬಷ್ಟು ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
ಕಡು ಬಡವರಿಂದ ಶ್ರೀಮಂತರ ತನಕ ಎಲ್ಲರ ಮನಗೆದ್ದಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಉದ್ದಗಲಕ್ಕೂ ಮನೆಮಾತಾಗಿದ್ದಾರೆ. ಪ್ರಬಲ ಹಿಂದೂ ನಾಯಕನೆಂಬ ಇಮೇಜ್‌ ಅವರಿಗೆ ಬಹುಸಂಖ್ಯಾತರ ಮತಗಳನ್ನು ಕ್ರೋಢೀಕರಿಸಲು ಸಹಕಾರಿಯಾಗಿದೆ. ಇದು ಭಾರತೀಯ ರಾಜಕಾರಣದ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ತೆರೆದಿದೆ. ಅಲ್ಪಸಂಖ್ಯಾತರ ಓಲೈಕೆಯ ಹಲವಾರು ದಶಕಗಳ ರಾಜಕಾರಣದ ಯುಗವನ್ನು ಅಂತ್ಯಗೊಳಿಸಿದೆ. ಈ ಐತಿಹಾಸಿಕ ಬದಲಾವಣೆಯ ಹಿಂದೆ ಮೋದಿಯವರ ಪ್ರಭಾವಳಿ ಎದ್ದು ಕಾಣುತ್ತಿದೆ. ಕಳೆದ ಸುಮಾರು ಒಂದು ದಶಕದಲ್ಲಿ ಕೇಸರಿ ಪಕ್ಷದ ಪ್ರಚಂಡ ಯಶಸ್ಸಿಗೆ 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮುನ್ನುಡಿ ಬರೆದರು.


ಕಾಂಗ್ರೆಸ್‌ ಅನ್ನು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಸಾರಥ್ಯದ ಬಿಜೆಪಿ ಧೂಳಿಪಟಗೊಳಿಸಿತ್ತು. ಲೋಕಸಭೆಯ ಒಟ್ಟು 543 ಕ್ಷೇತ್ರಗಳ ಪೈಕಿ 282 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಪೂರ್ಣ ಬಹುಮತ ಗಳಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿಬಿಜೆಪಿ 303 ಕ್ಷೇತ್ರಗಳಲ್ಲಿ ಗೆದ್ದು, 2014ರ ಫಲಿತಾಂಶಕ್ಕಿಂತಲೂ 21 ಹೆಚ್ಚು ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಕಳೆದ 30 ವರ್ಷಗಳಲ್ಲಿ ಯಾವುದೇ ರಾಜಕೀಯ ಪಕ್ಷ ಇಂಥ ಸಾಧನೆಯನ್ನು ಮಾಡಿರಲಿಲ್ಲ. ಈ ಜೈತ್ರಯಾತ್ರೆಯ ಮೂಲಕ ಭಾಜಪ ರಾಷ್ಟ್ರ ರಾಜಕಾರಣದಲ್ಲಿ ಐತಿಹಾಸಿಕವಾಗಿ ತನ್ನ ಪ್ರಾಬಲ್ಯವನ್ನು ದಾಖಲಿಸಿದೆ.

ಒಂದು ಕಡೆ ಪ್ರಧಾನಿ ಮೋದಿಯವರ ವರ್ಚಸ್ಸು, ಮತ್ತೊಂದು ಕಡೆ ಅಮಿತ್‌ ಶಾ ಅವರ ಸಂಘಟನಾ ಕೌಶಲ್ಯದ ಪರಿಣಾಮ ಬಿಜೆಪಿ ಕಳೆದ ಎಂಟು ವರ್ಷಗಳಲ್ಲಿ ಒಂದರ ಮೇಲೊಂದರಂತೆ ಚುನಾವಣೆಗಳನ್ನು ಗೆದ್ದುಕೊಂಡಿದೆ. ಗೃಹ ಸಚಿವರಾದ ಬಳಿಕವೂ ಅಮಿತ್‌ ಶಾ ಅವರು ಪಕ್ಷದ ಸಂಘಟನೆಯನ್ನು ಮರೆತಿಲ್ಲ. ಚುನಾವಣೆಗಳನ್ನು ಗೆಲ್ಲುವ ಬಿಜೆಪಿಯ ತಂತ್ರಗಾರಿಕೆ ಅದರ ಪ್ರತಿಸ್ಪರ್ಧಿಗಳಿಗೂ ಅಧ್ಯಯನದ ವಸ್ತುವಾಗಿದೆ. ಅದರ ಅನುಕರಣೆಯನ್ನು ಇತರ ಪಕ್ಷಗಳೂ ಮಾಡುತ್ತಿರುವುದನ್ನು ಗಮನಿಸಬಹುದು. ಇತ್ತೀಚಿನ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲೂ, ಆಡಳಿತ ವಿರೋಧಿ ಅಲೆಯನ್ನು ಗೆದ್ದ ಬಿಜೆಪಿಯ ಯಶಸ್ಸು ಅದರ ಹಾಗೂ ಮೋದಿಯವರ ಜನಪ್ರಿಯತೆಯನ್ನು ಬಿಂಬಿಸಿದೆ.

17 ರಾಜ್ಯಗಳಲ್ಲಿ ಬಿಜೆಪಿ ಆಡಳಿತ
ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಸ್ಪಷ್ಟವಾಗಿ ಪ್ರತಿಸ್ಪರ್ಧಿಗಳನ್ನು ಮಣಿಸಿ ಮುನ್ನಡೆದಿದೆ. ಪಕ್ಷ ಈಗ 17 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರದಲ್ಲಿದೆ. ಅಂದರೆ ಭಾರತದ ಶೇ.44 ಭೌಗೋಳಿಕ ಪ್ರದೇಶದಲ್ಲಿ ಭಾಜಪ ನೇತೃತ್ವದ ಆಡಳಿತ ಇದೆ. ಕರ್ನಾಟಕ, ಗೋವಾ, ಮಧ್ಯಪ್ರದೇಶ, ಗುಜರಾತ್‌, ಬಿಹಾರ, ಸಿಕ್ಕಿಂ, ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರ, ಮಿಝೋರಾಂ, ಮೇಘಾಲಯ, ನಾಗಾಲ್ಯಾಂಡ್‌, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡ್‌, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರಕಾರ ಇದೆ. ಪುದುಚೇರಿಯಲ್ಲೂ ಬಿಜೆಪಿ ಸಾರಥ್ಯವಿದೆ. 2018ರಲ್ಲಿ ಬಿಜೆಪಿ ಸ್ವಂತ ಬಲ ಅಥವಾ ಮೈತ್ರಿಕೂಟಗಳೊಂದಿಗೆ 21 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಮೋದಿ-ಅಮಿತ್‌ ಶಾ ನಾಯಕತ್ವ, ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರಸ್‌ ಪಕ್ಷದ ವೈಫಲ್ಯಕ್ಕೆ ರಾಜಕಾರಣ ರಂಗ ಸಾಕ್ಷಿಯಾಗಿದೆ. ಮೋದಿಯವರ ಸಾರಥ್ಯದಲ್ಲಿ ಭಾಜಪ ಹಿಂದುಳಿದ ವರ್ಗಗಳ ಒಲವನ್ನೂ ಗಳಿಸಿದೆ. ಮೇಲ್ವರ್ಗದ ಪಕ್ಷವೆಂಬ ಹಣೆಪಟ್ಟಿಯನ್ನು ಕಳಚಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ

Exit mobile version