ನವದೆಹಲಿ: ೨೦೧೪ರ ಲೋಕಸಭೆ ಚುನಾವಣೆಗೂ ಮುನ್ನವೇ ಯುಪಿಎ ಸರ್ಕಾರವು ದೆಹಲಿ ವಕ್ಫ್ ಬೋರ್ಡ್‌ಗೆ (Waqf Board Property) ನೀಡಿದ್ದ ೧೨೩ ಆಸ್ತಿಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲು ತೀರ್ಮಾನಿಸಿದೆ. ಮಸೀದಿ, ದರ್ಗಾ, ಸ್ಮಶಾನ ಜಾಗ ಸೇರಿ ನೂರಾರು ಆಸ್ತಿಗಳನ್ನು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಹಿಂಪಡೆಯಲು ನಿರ್ಧರಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ರಮುಖ ಸ್ಥಳದಲ್ಲಿರುವ ಆಸ್ತಿಗಳನ್ನು ದೆಹಲಿ ವಕ್ಫ್ ಮಂಡಳಿಗೆ ನೀಡಲಾಗಿದೆ ಎಂದು ಈಗಾಗಲೇ ವಿಶ್ವ ಹಿಂದು ಪರಿಷತ್ (VHP) ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಮಿತಿಗಳನ್ನು ರಚಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಆಸ್ತಿಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ.
ವಕ್ಫ್ ಮಂಡಳಿ ಅಧ್ಯಕ್ಷ ಆಕ್ಷೇಪ
ವಕ್ಫ್ ಆಸ್ತಿಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನೋಟಿಸ್ ನೀಡಿರುವುದಕ್ಕೆ ಆಮ್ ಆದ್ಮಿ ಪಕ್ಷದ ಶಾಸಕ, ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅಮಾನತುಲ್ಲಾ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರಕ್ಕೆ ಆಸ್ತಿ ವಶಪಡಿಸಿಕೊಳ್ಳುವ ಕುರಿತು ನೋಟಿಸ್ ಹೊರಡಿಸುವ ಅಧಿಕಾರವೇ ಇಲ್ಲ. ನಾವು ಈ ಕುರಿತು ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Waqf Property | ದೇಶದ್ರೋಹಿಗಳಿಂದ ವಕ್ಫ್ ಆಸ್ತಿ ಎಂಜಾಯ್, ಸದನದಲ್ಲಿ ಶಾಸಕ ಯತ್ನಾಳ್ ಆರೋಪ