ನವದೆಹಲಿ: ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ (ಗುಜರಾತ್‌ನ ಅಂದಿನ ಮುಖ್ಯಮಂತ್ರಿ)ಯವರಿಗೆ ವಿಶೇಷ ತನಿಖಾ ತಂಡ (SIT)ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿ ಜಖಿಯಾ ಜಾಫ್ರಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಜೂ.24ರಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಗಲಭೆಗೂ-ನರೇಂದ್ರ ಮೋದಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಎತ್ತಿಹಿಡಿದೆ. ಅದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟು, ಗಲಭೆ ಬಗ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಮಾತನಾಡಿದ್ದಾರೆ.
ʼಘಟನೆ ನಡೆದು 18-19 ವರ್ಷಗಳೇ ಆದವು. ಆದರೆ ಪ್ರಧಾನಿ ನರೇಂದ್ರ ಮೋದಿ ಮನಸಲ್ಲಿ ಆ ಗಲಭೆ-ಹಿಂಸಾಚಾರ ಸಾವು, ಜತೆಗೆ ಏನೂ ತಪ್ಪಿಲ್ಲದೆ ಇದ್ದರೂ ಸುಳ್ಳು ಅಪವಾದ ಮೈಮೇಲೆ ಹೊತ್ತುಕೊಂಡ ಸಂಕಟ ಇವತ್ತಿಗೂ ಇದೆ. ವಿಷ ಪಾನ ಮಾಡಿದ ಶಿವ ಅದನ್ನು ಕಂಠದಲ್ಲಿ ಇಟ್ಟುಕೊಂಡು ನೋವು ಅನುಭವಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಈ ನೋವನ್ನು 19 ವರ್ಷ ಒಂದೂ ಮಾತನಾಡದೆ, ಮೌನವಾಗಿಯೇ ಸಹಿಸಿದರು. ಅವರ ಮನಸಿನ ನರಳುವಿಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನರೇಂದ್ರ ಮೋದಿಗೆ ನಾನಾವತಿ ಕಮಿಷನ್‌ನಿಂದಲೂ ಕ್ಲೀನ್‌ಚಿಟ್ ಸಿಕ್ಕಿತ್ತು. ಎಸ್‌ಐಟಿ ಕೂಡ ಕ್ಲೀನ್ ಚಿಟ್ ಕೊಟ್ಟಿತ್ತು. ಕೋರ್ಟ್‌ನಲ್ಲೂ ವಿಚಾರಣೆ ಮುಗಿದು, ಅವರದೇನೂ ತಪ್ಪಿಲ್ಲ ಎಂದಾಗಿತ್ತು. ಅಷ್ಟಾದರೂ ಆರೋಪ ಅವರ ಬಿಟ್ಟು ಹೋಗಲಿಲ್ಲ. ಒಬ್ಬ ದೃಢಮನಸ್ಸಿನ, ಇಚ್ಛಾಶಕ್ತಿಯುಳ್ಳ ವ್ಯಕ್ತಿ ಮಾತ್ರ ಇವೆಲ್ಲವನ್ನೂ ಸಹಿಸಿಕೊಳ್ಳಬಲ್ಲʼ ಎಂದು ಅಮಿತ್ ಶಾ ಹೇಳಿದ್ದಾರೆ.
ಮೋದಿ ಕಾನೂನು ಪಾಲಕ
ʼನರೇಂದ್ರ ಮೋದಿ ಯಾವಾಗಲೂ ಕಾನೂನನ್ನು ಗೌರವಿಸುತ್ತಾರೆ. ಗೋದ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಆರು ಕೋಚ್‌ಗಳಿಗೆ ಬೆಂಕಿ ಹಚ್ಚಿದ್ದೇ ಗುಲ್ಬರ್ಗ್ ಸೊಸೈಟಿ ಹಿಂಸಾಚಾರಕ್ಕೆ ಮೂಲ ಕಾರಣ. ಅಂದು ಗುಜರಾತ್‌ನಲ್ಲಿ ರೈಲಿಗೆ ಬೆಂಕಿ ಹಚ್ಚಿದಾಗ ಜನರೆಲ್ಲ ಕಣ್ಣೆದುರಲ್ಲೇ ಸಜೀವ ದಹನವಾದರು. ನಾನೂ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಎಲ್ಲಿ ನೋಡಿದರೂ ಬರಿ ಸುಟ್ಟುಕರಕಲಾದ ಮೃತದೇಹಗಳೇ ತುಂಬಿದ್ದವು. ರೈಲಿಗೆ ಬೆಂಕಿ ಹಚ್ಚಿದ ಗಲಭೆಯನ್ನೇನೋ ನಿಯಂತ್ರಿಸುವಲ್ಲಿ ಆಗಿನ ಗುಜರಾತ್ ಸರ್ಕಾರ ಸಫಲವಾಯಿತು. ಆದರೆ ಮರುದಿನ ನಡೆದ ಹಿಂಸಾಚಾರದ ಸಣ್ಣ ಕಲ್ಪನೆಯಾಗಲಿ, ನಿರೀಕ್ಷೆಯಾಗಲಿ ಯಾರಿಗೂ ಇರಲಿಲ್ಲ. ದುರದೃಷ್ಟಕ್ಕೆ ಈ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದೇ ನರೇಂದ್ರ ಮೋದಿ ಮತ್ತು ನಾವೆಲ್ಲ ಎಂಬ ಆರೋಪ ಕೇಳಿಬಂತು. ತನಿಖೆಗಾಗಿ ವಿಶೇಷ ತನಿಖಾ ತಂಡ (SIT)ವನ್ನು ರಚಿಸಲಾಯಿತು. ನಮ್ಮನ್ನೆಲ್ಲ ವಿಚಾರಣೆಗೆ ಒಳಪಡಿಸಲಾಯಿತು. ತನಿಖೆಗೆ ಸಹಕರಿಸುವಂತೆ ಎಸ್‌ಐಟಿ ಹೇಳಿತ್ತು. ನಾವೂ ಕಾನೂನಿಗೆ ತಲೆಬಾಗಿ ಸಂಪೂರ್ಣ ವಿಚಾರಣೆ ಎದುರಿಸಿದೆವುʼ ಎಂದು ತಿಳಿಸಿದರು.
ಮೋದಿ ಜೀ ನಾಟಕ ಮಾಡಲಿಲ್ಲ
ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಇ.ಡಿ.ವಿಚಾರಣೆಗೆ ಹಾಜರಾದ ರೀತಿ, ಅದಕ್ಕಾಗಿ ಕಾಂಗ್ರೆಸ್ ಮಾಡಿದ ಪ್ರತಿಭಟನೆಗಳು, ಸತ್ಯಾಗ್ರಹ, ಸೃಷ್ಟಿಸಿದ ಅವಾಂತರಗಳ ಬಗ್ಗೆಯೂ ಇದೇ ವೇಳೆ ವ್ಯಂಗ್ಯವಾಡಿದ ಗೃಹ ಸಚಿವ ಅಮಿತ್ ಶಾ, “ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದವರು. ಹಾಗಿದ್ದಾಗ್ಯೂ ತಮ್ಮ ಮೇಲೆ ಅಪವಾದ ಬಂದು, ಅದಕ್ಕೆ ಸಂಬಂಧಿತ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ಸೂಚನೆ ನೀಡಿದಾಗ ಅವರು ಯಾವುದೇ ನಾಟಕ ಮಾಡಲಿಲ್ಲ. ನಾನು ಒಳಗೆ ವಿಚಾರಣೆ ಎದುರಿಸುತ್ತಿದ್ದಾಗ ನೀವೆಲ್ಲ ಹೊರಗೆ ಧರಣಿ, ಸತ್ಯಾಗ್ರಹ ಮಾಡಿ ಎಂದು ಬಿಜೆಪಿ ಶಾಸಕ-ಸಂಸದರು-ಕಾರ್ಯಕರ್ತರಿಗೆ ಕರೆ ಕೊಡಲಿಲ್ಲ. ಅವರಷ್ಟಕ್ಕೆ ಅವರು ಹೋಗಿ ಎಸ್‌ಐಟಿಯ ತನಿಖೆಗೆ ಸಹಕರಿಸಿದರು. ಎಲ್ಲವೂ ಶಾಂತಿಯುತವಾಗಿಯೇ ನಡೆಯಿತು. ಸಂವಿಧಾನವನ್ನು ಹೇಗೆ ಗೌರವಿಸಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಪ್ರತಿಪಕ್ಷಗಳು ಕಲಿಯಲಿ. ಈಗ ಸುಪ್ರೀಂಕೋರ್ಟ್ ಕೂಡ ಕ್ಲೀನ್ ಚಿಟ್ ಕೊಟ್ಟಿದೆ. ಇಷ್ಟುದಿನ ಮೋದಿ ವಿರುದ್ಧ ಆರೋಪ ಮಾಡಿದವರೆಲ್ಲ ಈಗ ಅವರ ಬಳಿ ಕ್ಷಮೆ ಕೇಳಬೇಕು ಎಂದರು.
ಇದನ್ನೂ ಓದಿ: ಗುಜರಾತ್ ಗಲಭೆ: ಮೋದಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್