Site icon Vistara News

Shyam Rangeela: ಮೋದಿಯನ್ನು ಮಿಮಿಕ್ರಿ ಮಾಡಿ ಖ್ಯಾತಿಯಾದ ಕಲಾವಿದ ಈಗ ಪ್ರಧಾನಿ ವಿರುದ್ಧವೇ ಕಣಕ್ಕೆ!

shyam rangeela

‘Modi mimic’ Shyam Rangeela set to contest from Varanasi against PM Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಲಿಯಲ್ಲೇ ಮಾತನಾಡುತ್ತ, ಜೋಕ್‌ಗಳನ್ನು ಮಾಡುತ್ತ ಖ್ಯಾತಿ ಗಳಿಸಿದ ಹಾಸ್ಯ ಕಲಾವಿದ ಶ್ಯಾಮ್‌ ರಂಗೀಲಾ (Shyam Rangeela) ಅವರೀಗ ವಾರಾಣಸಿ (Varanasi) ಲೋಕಸಭೆ ಕ್ಷೇತ್ರದಲ್ಲಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧವೇ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಹಾಗಾಗಿ, ವಾರಾಣಸಿ ಲೋಕಸಭೆ ಕ್ಷೇತ್ರವೀಗ ಮತ್ತಷ್ಟು ರಂಗೇರಿದಂತಾಗಿದೆ. ಈಗಾಗಲೇ ಪ್ರಮುಖ ಪಕ್ಷಗಳು ವಾರಾಣಸಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಿವೆ. ಹಾಗಾಗಿ, ಶ್ಯಾಮ್‌ ರಂಗೀಲಾ ಅವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ಥಾನದವರಾದ 29 ವರ್ಷದ ಶ್ಯಾಮ್‌ ರಂಗೀಲಾ ಅವರು ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಮಿಮಿಕ್ರಿ ಮಾಡುತ್ತ ಖ್ಯಾತಿ ಗಳಿಸಿದ್ದಾರೆ. ಇವರ ಹಾಸ್ಯಪ್ರಜ್ಞೆಯನ್ನೂ ಜನ ಮೆಚ್ಚಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರಿಗೆ ಪರಿಚಿತರಾಗಿದ್ದಾರೆ. “ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ನಾನು ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಮುಂದಿನ ವಾರ ನಾನು ವಾರಾಣಸಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ” ಎಂದು ಹೇಳಿದರು.

“ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ನಾವು ನಿಮ್ಮ ಜತೆ ಇದ್ದೇವೆ ಎಂಬ ಸಂದೇಶವನ್ನು ರವಾನಿಸಲಾದರೂ, ಪ್ರಜಾಪ್ರಭುತ್ವವನ್ನು ಅಪಾಯದ ಅಂಚಿಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂಬುದನ್ನು ಮನವರಿಕೆ ಮಾಡಲಿಕ್ಕಾದರೂ ನಾನು ಸ್ಪರ್ಧಿಸುತ್ತೇನೆ. ಕನಿಷ್ಠ ಪಕ್ಷ, ಇಂದೋರ್‌ ಹಾಗೂ ಸೂರತ್‌ನಲ್ಲಿ (ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿರುವುದು) ಎದುರಾದ ಪರಿಸ್ಥಿತಿ ಇಲ್ಲಿ ಉಂಟಾಗದಂತೆ ಮಾಡಲು, ಜನ ಕನಿಷ್ಠಪಕ್ಷ ಮತದಾನವನ್ನಾದರೂ ಮಾಡಲಿ ಎಂಬುದಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ” ಎಂದು ತಿಳಿಸಿದರು.

ಮೋದಿ ವಿರುದ್ಧ ಕಣಕ್ಕಿಳಿದ ನಾಯಕರಿವರು

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಈಗ ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಗ್ಯಾಂಗ್‌ಸ್ಟರ್‌ ಪತ್ನಿಗೆ ಟಿಕೆಟ್‌

ಉತ್ತರ ಪ್ರದೇಶದ ಜೌನ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿಯು ಗ್ಯಾಂಗ್‌ಸ್ಟರ್‌ ಧನಂಜಯ್‌ ಸಿಂಗ್‌ ಪತ್ನಿ ಶ್ರೀಕಲಾ ಸಿಂಗ್‌ ಅವರಿಗೆ ಟಿಕೆಟ್‌ ನೀಡಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. ಇನ್ನು, ಮೈನ್‌ಪುರಿಯಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿರುವ ಬಿಎಸ್‌ಪಿಯು, ಶಿವಪ್ರಸಾದ್‌ ಯಾದವ್‌ ಅವರಿಗೆ ಮಣೆ ಹಾಕಿದೆ. ಬರೇಲಿಯಲ್ಲಿ ಛೋಟಾಲಾಲ್‌ ಗಂಗ್ವಾರ್‌, ಬಂಡಾದಲ್ಲಿ ಮಯಾಂಕ್‌ ದ್ವಿವೇದಿ, ಘಾಜಿಪುರದಲ್ಲಿ ಉಮೇಶ್‌ ಕುಮಾರ್‌ ಸಿಂಗ್‌ ಸೇರಿ 11 ಕ್ಷೇತ್ರಗಳಲ್ಲಿ ಬಿಎಸ್‌ಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ

ಇದನ್ನೂ ಓದಿ: BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

Exit mobile version