ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನಲ್ಲೇ ಜನಪ್ರಿಯ ನಾಯಕ ಎಂಬುದಾಗಿ ಹತ್ತಾರು ಅಂತಾರಾಷ್ಟ್ರೀಯ ಸಮೀಕ್ಷೆಗಳಿಂದ ದೃಢಪಟ್ಟಿದೆ. ಇದರ ಬೆನ್ನಲ್ಲೇ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಕೂಡ ನರೇಂದ್ರ ಮೋದಿ (Giorgia Meloni On Modi) ಅವರನ್ನು ಹೊಗಳಿದ್ದಾರೆ. “ಜಾಗತಿಕ ನಾಯಕರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಪ್ರೀತಿಪಾತ್ರರು” ಎಂದು ಹೇಳಿದರು.
ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ ಜಾರ್ಜಿಯಾ ಮೆಲೋನಿ ಅವರನ್ನು ನರೇಂದ್ರ ಮೋದಿ ಸ್ವಾಗತಿಸಿದರು. ರಾಷ್ಟ್ರಪತಿ ಭವನದಲ್ಲಿ ಅವರಿಗೆ ಗೌರವ ವಂದನೆಯೂ ಸಲ್ಲಿಸಲಾಯಿತು. ಇದಾದ ಬಳಿಕ ಮಾತನಾಡಿದ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದರು.
“ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದರು.