Site icon Vistara News

Kirti Azad | ಮೋದಿ ಧರಿಸಿದ್ದ ಉಡುಗೆ ಮಹಿಳೆಯರದ್ದಾ, ಪುರುಷರದ್ದಾ ಎಂದು ಗೇಲಿ ಮಾಡಿದ ಕೀರ್ತಿ ಆಜಾದ್; ಭುಗಿಲೆದ್ದ ವಿವಾದ

Narendra Modi @ Kirti Azad

ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇಘಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಅವರು ಧರಿಸಿದ್ದ ಉಡುಗೆ ಈಗ ಚರ್ಚೆಗೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರೂ ಆಗಿರುವ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ (Kirti Azad) ಅವರು, ಮೇಘಾಲಯದ ಕಾರ್ಯಕ್ರಮದಲ್ಲಿ ಧರಿಸಿದ್ದ ಉಡುಗೆಯ ಚಿತ್ರಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ, ”ಇದು ಗಂಡಸರದ್ದೂ ಅಲ್ಲ, ಹೆಂಗಸರದ್ದೂ ಅಲ್ಲ, ಕೇವಲ ಆರಾಧಕನ ಫ್ಯಾಷನ್,” ಎಂದು ವ್ಯಂಗ್ಯವಾಡಿದ್ದಾರೆ.

ಮೇಘಾಲಯದ ಶಿಲ್ಲಾಂಗ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ ಅವರು ಮೇಘಾಲಯದ ಸಾಂಪ್ರದಾಯಿಕ ಖಾಸಿ ಉಡುಗೆಯನ್ನು ತೊಟ್ಟಿದ್ದರು. ಆ ಕಾರ್ಯಕ್ರಮದ ಫೋಟೋಗಳನ್ನೇ ಕೀರ್ತಿ ಆಜಾದ್ ಅವರು ಟ್ವೀಟ್ ಮಾಡಿ, ವಿವಾದಕ್ಕೆ ಕಾರಣವಾಗಿದ್ದಾರೆ.

https://twitter.com/KirtiAzaad/status/1605555801279664130

ಕೀರ್ತಿ ಅಜಾದ್ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅಸ್ಸಾಮ್ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು, ”ಮೇಘಾಲಯದ ಸಂಪ್ರದಾಯವನ್ನು ಪ್ರಮುಖ ನಾಯಕೊಬ್ಬರು ವ್ಯಂಗ್ಯವಾಡುತ್ತಿರುವುದರ ಬಗ್ಗೆ ದುಃಖವಾಗಿದೆ. ಸಂಪ್ರದಾಯಕ್ಕೆ ಅಗೌರವ ತೋರಿ, ಮೇಘಾಲಯದ ಸಾಂಪ್ರದಾಯಿಕ ಉಡುಗೆಯನ್ನು ಅವಮಾನಿಸುತ್ತಿದ್ದಾರೆ. ಒಂದು ವೇಳೆ ಅಜಾದ್ ಅವರ ಹೇಳಿಕೆಯನ್ನು ಟಿಎಂಸಿ ಒಪ್ಪುವುದಾದರೆ ಈ ಬಗ್ಗೆ ಸ್ಪಷ್ಟಪಡಿಸಬೇಕು. ಅವರ(ಟಿಎಂಸಿ) ಮೌನವು ಬೆಂಬಲದಂತೆ ಕಾಣಿಸುತ್ತದೆ ಮತ್ತು ಇದನ್ನು ಜನರು ಎಂದೂ ಕ್ಷಮಿಸಲಾರರು,” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಪರಿಶಿಷ್ಟ ಪಂಗಡದ ಮೋರ್ಚಾ ಟ್ವಿಟರ್ ಖಾತೆಯಲ್ಲಿ ಕೀರ್ತಿ ಅಜಾದ್ ಅವರ ಹೇಳಿಕೆಯನ್ನು ಟೀಕಿಸಿದೆ. ”ಮೋದಿ ಧರಿಸಿದ್ದ ಉಡುಗೆಯನ್ನು ಮಹಿಳೆಯದ್ದಾ ಅಥವಾ ಪುರುಷನದ್ದಾ ಎಂದು ಕೇಳುವ ಮೂಲಕ ನೀವು ಬುಡಕಟ್ಟು ವೇಷಭೂಷಣವನ್ನು ಅವಮಾನಿಸಿದ್ದೀರಿ. ನೀವು ಮತ್ತು ನಿಮ್ಮ ಪಕ್ಷದವರು ಆದಿವಾಸಿಗಳನ್ನು ದ್ವೇಷಿಸುವ ಇತಿಹಾಸವನ್ನು ಹೊಂದಿದ್ದೀರಿ. ಈ ಟೀಕೆಗಾಗಿ ನಿಮ್ಮ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ಜಾತಿನಿಂದನೆಯಡಿ ಕೇಸ್ ದಾಖಲಿಸಬೇಕು” ಎಂದು ತಿರುಗೇಟು ನೀಡಲಾಗಿದೆ.

ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಕೀರ್ತಿ ಆಜಾದ್, ”ನಾನು ಉಡುಗೆಗೆ ಅಗೌರವ ತೋರಿಲ್ಲ. ಅದನ್ನು ಇಷ್ಟಪಡುತ್ತೇನೆ. ನಾನು ಏನು ಹೇಳೋದಕ್ಕೆ ಹೊರಟಿದ್ದೆ ಎಂದರೆ, ನಮ್ಮ ಪ್ರಧಾನಿಗಳು ಫ್ಯಾಷನ್ ಮಾಡುವುದರಲ್ಲಿ ನಿಸ್ಸೀಮರು. ಅಂಥ ಯಾವುದೇ ಅವಕಾಶವನ್ನು ಬಿಟ್ಟು ಕೊಡುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | UNESCO List | ಯುನೆಸ್ಕೋ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಮೋದಿ ಜನಿಸಿದ ವಡ್ನಗರ್ ಪಟ್ಟಣ!

Exit mobile version