ಪಟನಾ: ಮೋದಿ ಎಂಬ ಉಪನಾಮ (Modi Surname Row) ಹೊಂದಿದವರೆಲ್ಲರೂ ಕಳ್ಳರೇ ಎಂದು ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂರತ್ ನ್ಯಾಯಾಲಯವು ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಕಾರಣ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 25ರಂದು ಹಾಜರಾಗುವಂತೆ ಪಟನಾ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದೆ.
ಮೋದಿ ಉಪನಾಮ ಕುರಿತು ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ರಾಜ್ಯಸಭೆ ಸದಸ್ಯ, ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಅವರು ಪಟನಾದ ಎಂಪಿ-ಎಂಎಲ್‌ಎ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, “ರಾಹುಲ್ ಗಾಂಧಿ ಅವರು ಮೋದಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ” ಎಂದು ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದೆ. ಅದರಂತೆ, ರಾಹುಲ್ ಗಾಂದಿ ಅವರು ಏಪ್ರಿಲ್ 25ರಂದು ಪಟನಾ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸುಶೀಲ್ ಕುಮಾರ್ ಮೋದಿ ಅವರು ಸಲ್ಲಿಸಿದ ಅರ್ಜಿಯನ್ನು ಮಾರ್ಚ್ 18ರಂದು ವಿಚಾರಣೆ ನಡೆಸಿದ್ದ ಎಂಪಿ-ಎಂಎಲ್‌ಎ ಕೋರ್ಟ್ ಸ್ಪೆಷಲ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಆದಿ ದೇವ್ ಅವರು, ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿ ಅವರಿಗೆ ಸೂಚಿಸಿದ್ದರು. ಆದರೆ, ಸೂರತ್ ನ್ಯಾಯಾಲಯದ ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಅವರ ಪರ ವಕೀಲರ ತಂಡವು ಬ್ಯುಸಿಯಾಗಿದೆ. ಹಾಗಾಗಿ, ಮತ್ತೊಂದು ದಿನಾಂಕ ನಿಗದಿಪಡಿಸುವಂತೆ ಕಾಂಗ್ರೆಸ್ ನಾಯಕನ ಪರ ವಕೀಲರ ವಾದ ಮಂಡಿಸಿದರು. ಇದಕ್ಕೆ ಕೋರ್ಟ್ ಸಮ್ಮತಿ ಸೂಚಿಸಿದೆ.
2019ರ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಕೋಲಾರದಲ್ಲಿ ರ‍್ಯಾಲಿ ನಡೆಸಿದ್ದ ರಾಹುಲ್ ಗಾಂಧಿ, “ಮೋದಿ ಉಪನಾಮ ಹೊಂದಿರುವ ಎಲ್ಲರೂ ಕಳ್ಳರೇ ಏಕಾಗಿದ್ದಾರೆ” ಎಂದು ಹೇಳಿದ್ದರು. ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಗುಜರಾತ್ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರು ಕಾಂಗ್ರೆಸ್ ನಾಯಕನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದರಂತೆ, ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗಾಗಿ, ಅವರು ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದು, ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ ಮಾತ್ರ ಅವರು ಬಚಾವಾಗುತ್ತಾರೆ. ಇಲ್ಲದಿದ್ದರೆ, ಇನ್ನೂ ಎಂಟು ವರ್ಷ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ.
ಇದನ್ನೂ ಓದಿ: ನಿಮ್ಮ ನಾಲಗೆ ಕತ್ತರಿಸುತ್ತೇವೆ, ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಜಡ್ಜ್‌ಗೆ ಕೈ ನಾಯಕ ಬೆದರಿಕೆ
ರಾಹುಲ್ ಗಾಂಧಿ ಸಲ್ಲಿಸಿದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಅವರು ಮಾರ್ಚ್ ಏಪ್ರಿಲ್ 13ರಂದು ಗುಜರಾತ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಹಾಗೂ ಸೆಷನ್ಸ್ ಕೋರ್ಟ್‌ಗೆ ಹಾಜರಾಗಬೇಕಿದೆ. ಹಾಗೆಯೇ, ಅವರಿಗೆ ನೀಡಿದ ಶಿಕ್ಷೆಯ ಮಾನ್ಯತೆ ಬಗ್ಗೆ ಮೇ 3ರಂದು ವಿಚಾರಣೆ ನಡೆಯಲಿದ್ದು, ಆಗಲೂ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕದೆ.