ಹೊಸದಿಲ್ಲಿ: ಕೋವಿಡ್ -19 ಬಿಕ್ಕಟ್ಟಿನ ಪರಿಣಾಮ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ ಮಾಸಿಕ 4,000 ರೂ.ಗಳ ನೆರವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ್ದಾರೆ.
ಮಕ್ಕಳ ಶಾಲಾ ಶಿಕ್ಷಣ, ವಸತಿ, ಸ್ಕಾಲರ್‌ಶಿಪ್, ಐದು ಲಕ್ಷ ರೂ.ಗಳ ಆರೋಗ್ಯ ವಿಮೆ, ಉನ್ನತ ಶಿಕ್ಷಣ ವೆಚ್ಚಕ್ಕೆ ಹಣಕಾಸು ನೆರವಿನ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು.
” ಕೋವಿಡ್-19 ಬಿಕ್ಕಟ್ಟಿನ ವೇಳೆ ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವವರ ನೋವು ಮತ್ತು ಸಂಕಟ, ಕಷ್ಟ ಏನೆಂಬುದು ನನಗೆ ಗೊತ್ತಿದೆ. ಈ ಯೋಜನೆಯು ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ದೊರೆಯಲಿದೆʼʼ ಎಂದು ಮೋದಿ ತಿಳಿಸಿದರು. ಪಿಎಂ ಕೇರ್ಸ್ ಯೋಜನೆಯ ಅಡಿಯಲ್ಲಿ ಈ ನೆರವನ್ನು ನೀಡಲಾಗುತ್ತಿದೆ.
ಭವಿಷ್ಯದ ದಿನಗಳಲ್ಲಿ ಮಕ್ಕಳು ಉನ್ನತ ಮತ್ತು ವೃತ್ತಿಪರ ಶಿಕ್ಷಣಕ್ಕೆ ಸಾಲ ಪಡೆಯಲು ಬಯಸಿದರೆ ಪಿಎಂ ಕೇರ್ಸ್ ಸಹಕರಿಸಲಿದೆ ಎಂದರು. ಈ ಯೋಜನೆಯಲ್ಲಿ ಮಕ್ಕಳು 23 ವರ್ಷ ವಯಸ್ಸಾದಾಗ ೧೦ ಲಕ್ಷ ರೂ.ಹಳ ನೆರವನ್ನು ಪಡೆಯಲಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಸಿಗಲಿದೆ.
“ನಾನು ಮಕ್ಕಳನ್ನು ಪ್ರಧಾನಿ ಎಂಬ ನೆಲೆಯಲ್ಲಿ ನೋಡುತ್ತಿಲ್ಲ. ನಿಮ್ಮ ಮನೆಯ ಸದಸ್ಯನಾಗಿ ನೋಡುತ್ತಿದ್ದೇನೆ. ಪಿಎಂ ಕೇರ್ಸ್ ಯೋಜನೆಯನ್ನು ಮಕ್ಕಳಿಗೆ ನೀಡುತ್ತಿರುವುದಕ್ಕೆ ಇವತ್ತು ನಿರಾಳವಾಗುತ್ತಿದೆʼʼ ಎಂದು ಮೋದಿ ಹೇಳಿದರು.
ಮಕ್ಕಳ ಆರೈಕೆಯಲ್ಲಿ ಪೋಷಕರ ಪಾತ್ರವನ್ನು, ಅವರು ನೀಡುವ ವಾತ್ಸಲ್ಯವನ್ನು ಬೇರೆಯವರಿಂದ ಭರಿಸಲು ಸಾಧ್ಯವಿಲ್ಲ. ಆದರೆ ತಾಯಿ ಭಾರತಿ ನಿಮ್ಮೊಡನೆ ಇದ್ದಾಳೆ. ಪಿಎಂ ಕೇರ್ಸ್ ಮೂಲಕ ಭಾರತ ನಿಮ್ಮೊಂದಿಗೆ ಇದೆ. ಇದು ಒಬ್ಬ ವ್ಯಕ್ತಿಯಿಂದ ಆಗಿದ್ದಲ್ಲ, ಜನರ ಪರಿಶ್ರಮದ ದುಡ್ಡು ಪಿಎಂ ಕೇರ್ಸ್ ಮೂಲಕ ಮಕ್ಕಳ ಒಳಿತಿಗೆ ವಿನಿಯೋಗವಾಗಲಿದೆʼʼ ಎಂದು ಮೋದಿ ವಿವರಿಸಿದರು.
ಇದನ್ನೂ ಓದಿ: PM Cares : ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ, ಪಿಎಂ ಕೇರ್ಸ್ ಯೋಜನೆಯ ಸೌಲಭ್ಯ ವಿತರಣೆ