ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿದೇಶ ಪ್ರವಾಸ ಕೈಗೊಂಡಾಗಲೆಲ್ಲ ಗೌತಮ್ ಅದಾನಿ (Gautam Adani) ನೇತೃತ್ವದ ಕಂಪನಿಗಳಿಗೆ ಲಾಭವಾಗಿದೆ. ಸಾಕಷ್ಟು ವ್ಯವಹಾರಿಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಅವರು ಆಪಾದಿಸಿದರು. ಮಂಗಳವಾರ ಲೋಕಸಭೆಯಲ್ಲಿ (Parliament Budget Session) ಮಾತನಾಡಿದ ಅವರು, ಮೋದಿ ಅವರ ನಂಟಿನಿಂದಾಗಿ ಅದಾನಿ ಹೇಗೆ ಲಾಭ ಪಡೆದುಕೊಳ್ಳುತ್ತಿದ್ದಾರೆಂದು ವಿವರಿಸಿ, ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸಿದರು.
ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರು. ಬಳಿಕ ಎಸ್ಐಬಿ ಬ್ಯಾಂಕ್ ಅದಾನಿ ಕಂಪನಿಗೆ ಬಿಲಿಯನ್ ಡಾಲರ್ ಸಾಲ ನೀಡಿತು. ಪ್ರಧಾನಿ ಮೋದಿ ಬಾಂಗ್ಲಾದೇಶಕ್ಕೆ ತೆರಳಿದ ಕೆಲವೆ ದಿನಗಳಲ್ಲಿ, ಅಲ್ಲಿನ ವಿದ್ಯುತ್ ಪೂರೈಕೆಯ ಒಪ್ಪಂದವನ್ನು 25 ವರ್ಷಗಳ ಕಾಲ ಅದಾನಿಗೆ ನೀಡಲಾಗುತ್ತದೆ. ಹಾಗೆಯೇ, 2022ರ ಜೂನ್ ತಿಂಗಳಲ್ಲಿ ಮೋದಿ ಅವರ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಅಧ್ಯಕ್ಷ ರಾಜಪಕ್ಸೆ ಜತೆ ಮಾತುಕತೆ ನಡೆಸಿದರು. ಬಳಿಕ, ರಾಜಪಕ್ಸೆ ಅವರು ವಿಂಡ್ ಪವರ್ ಉತ್ಪಾದನೆಗೆ ಅದಾನಿ ಹೆಸರನ್ನು ಸೂಚಿಸಿದ್ದಾರೆಂದು ಅಲ್ಲಿನ ಅಧಿಕಾರಿಗಳೇ ಬಹಿರಂಗವಾಗಿ ಹೇಳಿದ್ದರು ಎಂದ ರಾಹುಲ್ ಗಾಂಧಿ ಅವರು, ಹೇಗೆ ಮೋದಿ ಮೂಲಕ ಅದಾನಿ ಲಾಭ ಮಾಡಿಕೊಳ್ಳುತ್ತಿದ್ದಾರೆಂದು ವಿವರಿಸಿದರು.
ಇದನ್ನೂ ಓದಿ: Parliament Budget Session: ಎಚ್‌ಎಎಲ್ ಬಿಟ್ಟು ದಿವಾಳಿಯಾದವರಿಗೆ ಕಾಂಟ್ರಾಕ್ಟ್ ನೀಡಿದರು: ರಾಹುಲ್ ವಾಗ್ದಾಳಿ
ವಿದೇಶದಲ್ಲಿ ಹಲವು ಶೆಲ್ ಕಂಪನಿ
ಅದಾನಿ ಕಂಪನಿಯ ಜೊತೆಗೆ ವಿದೇಶದಲ್ಲಿ ಹಲವು ಶೆಲ್ ಕಂಪನಿಗಳಿವೆ. ಅವುಗಳ ಮೂಲಕ ಸಾವಿರಾರು ಕೋಟಿ ಹಣ ಹೂಡಲಾಗುತ್ತಿದೆ. ಈ ಶೆಲ್ ಕಂಪನಿಗಳು ಯಾರ ಕೈಯಲ್ಲಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇಲ್ಲವೇ? ಇಷ್ಟೆಲ್ಲ, ವ್ಯವಹಾರವನ್ನು ಸರ್ಕಾರದ ಸಹಾಯ ಇಲ್ಲದೆಯೇ ಮಾಡುತ್ತಿದ್ದಾರೆಯೇ ಎಂದು ರಾಹುಲ್ ಪ್ರಶ್ನಿಸಿದರು.