Site icon Vistara News

Shiv Sena Party Symbol: ಅಮಿತ್ ಶಾರನ್ನು ಮೊಗ್ಯಾಂಬೋಗೆ ಹೋಲಿಸಿ, ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ

Budget 2024 is the Modi governments last budget! How Opposition reacted?

ಮುಂಬೈ, ಮಹಾರಾಷ್ಟ್ರ: ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ ಪಕ್ಷದ ಚಿಹ್ನೆಯಾಗಿರುವ ಬಿಲ್ಲು ಮತ್ತು ಬಾಣವನ್ನು (Shiv sena party symbol) ಕಳೆದುಕೊಂಡಿರುವ ಉದ್ಧವ್ ಠಾಕ್ರೆ(Uddhav Thackeray), ಬಿಜೆಪಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಿಸ್ಟರ್ ಇಂಡಿಯಾ ಚಿತ್ರದ ಜನಪ್ರಿಯ ಸಂಭಾಷಣೆಯಾಗಿರುವ ಮೊಗ್ಯಾಂಬೋ ಖುಷ್ ಹುವಾ ಡೈಲಾಗ್ ಅನ್ನು ಶಾಗೆ ಹೇಳಿ ಕೆಣಕಿದ್ದಾರೆ.

ಮುಂಬೈನ ಅಂಧೇರಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ನಿನ್ನೆ ಯಾರೋ ಒಬ್ಬರು(ಅಮಿತ್ ಶಾ) ಅವರು ಪುಣೆಗೆ ಬಂದಿದ್ದರು. ಮಹಾರಾಷ್ಟ್ರದಲ್ಲಿ ಹೇಗೆ ಕೆಲಸಗಳು ನಡೆಯುತ್ತಿವೆ ಎಂದು ಕೇಳಿದರು. ಮತ್ತೊಬ್ಬರು ಯಾರೋ ಹೇಳಿದರು; ತುಂಬಾ ಚೆನ್ನಾಗಿ ನಡೆಯುತ್ತಿವೆ. ಯಾಕೆಂದರೆ, ನಮ್ಮೊಂದಿಗೆ(ಬಿಜೆಪಿ) ಬಂದಿರುವ ಗುಲಾಮರಿಗೆ ಶಿವ ಸೇನೆಯ ಚಿಹ್ನೆಯನ್ನು ನೀಡಲಾಗಿದೆ. ಆಗ ಅವರು(ಶಾ) ಹೇಳಿದರು, ತುಂಬಾ ಚೆನ್ನಾಗಿದೆ, ಮೊಗ್ಯಾಂಬೋ ಖುಷ್ ಹುವಾ ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಇವರೆಲ್ಲ ಇವತ್ತಿನ ಮೊಗ್ಯಾಂಬೋಗಳು. ಓರಿಜಿನಲ್ ಮೊಗ್ಯಾಂಬೋ ತರಹ, ಜನರು ತಮ್ಮ ಮಧ್ಯೆ ಹೊಡೆದಾಡಿಕೊಂಡು ಇರಬೇಕು ಎಂದು ಬಯಸುತ್ತಾರೆ. ಇದರಿಂದ ಅವರು ಅಧಿಕಾರವನ್ನು ಅನುಭವಿಸಬಹುದು ಎಂದು ಅಮಿತ್ ಶಾ ವಿರುದ್ಧ ಗುಡುಗಿದರು.

ಇದನ್ನೂ ಓದಿ: Eknath Shinde: ಏಕನಾಥ್‌ ಶಿಂಧೆಗೆ ಜಯ, ಶಿವಸೇನೆಯ ಬಿಲ್ಲು-ಬಾಣ ಗುರುತು ಶಿಂಧೆ ಬಣಕ್ಕೆ, ಉದ್ಧವ್‌ ಠಾಕ್ರೆಗೆ ಮುಖಭಂಗ

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದರು. 1993ರ ಸರಣಿ ಬಾಂಬ್ ಸ್ಫೋಟದ ವೇಳೆ ಮುಂಬೈ ನಗರಿಯನ್ನು ಶಿವಸೈನಿಕರು ರಕ್ಷಿಸಿದರು. ಈಗ ಹಿಂದುತ್ವದ ಬಗ್ಗೆ ಮಾತನಾಡುತ್ತಿರುವವರು ಆಗ ಎಲ್ಲಿ ಹೋಗಿದ್ದರು. ಅವರ ವಿಳಾಸ ಕೂಡ ಗೊತ್ತಿರಲಿಲ್ಲ. ಈಗ ಅವರು 56 ಇಂಚಿನ ಎದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆಗ ಎಲ್ಲಿ ಹೋಗಿತ್ತು ಇವರ 56 ಇಂಚಿನ ಎದೆ, ಬಹುಶಃ ಆಗ ಬೆವರುತ್ತಿದ್ದರು ಅಂತಾ ಕಾಣುತ್ತಿದೆ ಎಂದು ಠಾಕ್ರೆ ಟೀಕಿಸಿದರು.

Exit mobile version