Site icon Vistara News

Mohalla Clinics: ದೆಹಲಿ ಮೊಹಲ್ಲಾ ಕ್ಲಿನಿಕ್​​ ಅಕ್ರಮದ ಸಿಬಿಐ ತನಿಖೆಗೆ ಆದೇಶ; ಏನಿದು ಪ್ರಕರಣ?

mohalla clinic

mohalla clinic

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಪ್ರಮುಖ ಆರೋಗ್ಯ ಯೋಜನೆ ದೆಹಲಿಯ ಮೊಹಲ್ಲಾ ಕ್ಲಿನಿಕ್‌(Delhi’s Mohalla Clinics) ಕಾರ್ಯನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವಾಲಯವು (Home Ministry) ಕೇಂದ್ರ ತನಿಖಾ ದಳಕ್ಕೆ (CBI) ಆದೇಶ ನೀಡಿದೆ. ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಲು ರೋಗಿಗಳ ಪ್ರವೇಶವನ್ನು ಗುರುತಿಸಲು ನಕಲಿ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ನಡೆಸಿದ ರೋಗನಿರ್ಣಯ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕೇಳಿ ಬಂದ ಆರೋಪಗಳನ್ನು ತನಿಖೆಗೆ ಒಳಪಡಿಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಗುರುವಾರ (ಜನವರಿ 4) ಸಿಬಿಐಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊಹಲ್ಲಾ ಕ್ಲಿನಿಕ್‌ಗಳು ಯಾವುದೇ ರೋಗಿಗಳಿಲ್ಲದೆ ನಕಲಿ ರೇಡಿಯಾಲಜಿ ಮತ್ತು ರೋಗಶಾಸ್ತ್ರ ಪರೀಕ್ಷೆಗಳನ್ನು ನಡೆಸಿವೆ ಎಂಬ ದೂರು ಕೇಳಿ ಬಂದಿದೆ.

ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಸೆಪ್ಟೆಂಬರ್ 20ರಂದು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಬಳಿಕ ಮೊಹಲ್ಲಾ ಕ್ಲಿನಿಕ್‌ಗಳಿಗೆ ನಿಯೋಜಿಸಲಾಗಿದ್ದ ಏಳು ವೈದ್ಯರನ್ನು ವಜಾ ಮಾಡಲಾಗಿತ್ತು. ಕೆಲವು ವೈದ್ಯರು ತಡವಾಗಿ ಕ್ಲಿನಿಕ್‌ಗೆ ಬರುತ್ತಿರುವುದು ಮತ್ತು ಇನ್ನು ಕೆಲವರು ಕ್ಲಿನಿಕ್‌ಗೆ ಬರದೆ ಹಾಜರಿ ಹಾಕುತ್ತಿರುವುದು ಗಮನಕ್ಕೆ ಬಂದಿತ್ತು. ಮೂಲಗಳ ಪ್ರಕಾರ ದೆಹಲಿ ಸರ್ಕಾರವು ಆರೋಗ್ಯ ಕಾರ್ಯದರ್ಶಿಯನ್ನು ಅಮಾನತು ಮಾಡುವ ಸಾಧ್ಯತೆ ಇದೆ. ಕೆಲವು ದಿನಗಳ ಹಿಂದೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ದೆಹಲಿ ಸರ್ಕಾರಿ ಆಸ್ಪತ್ರೆಗಳಿಗೆ ಕಳಪೆ ಗುಣಮಟ್ಟದ ಔಷಧಿಗಳನ್ನು ಪೂರೈಸಿದ ಆರೋಪದ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ದೆಹಲಿ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಈ ಬಗ್ಗೆ ಮಾತನಾಡಿ, ʼʼಮೊಹಲ್ಲಾ ಕ್ಲಿನಿಕ್ ಎಂದು ಕರೆಯಲ್ಪಡುವ ಯೋಜನೆ ರೋಗಶಾಸ್ತ್ರೀಯ ಪರೀಕ್ಷೆಗೆ ಸೌಲಭ್ಯವನ್ನು ಒದಗಿಸಿದೆ. ವಿಜಿಲೆನ್ಸ್ ವರದಿಗಳು ಮತ್ತು ಇಲಾಖಾ ಸಂಶೋಧನೆಗಳ ಆಧಾರದ ಮೇಲೆ ಈ ಪರೀಕ್ಷೆಗಳು ಈಗ ತನಿಖಾ ಹಂತದಲ್ಲಿವೆ. ಅಮೃತ್ ಕಾಲ್ ಅನ್ನು ಪರಿಚಯಿಸಿದ ನಂತರವೂ, ಸೂಪರ್-ಸ್ಪೆಷಾಲಿಟಿ ಲ್ಯಾಬ್ ಮಾಡುವ ಬದಲು ಇನ್ನೂ ಹಳೆಯ ಮೊಹಲ್ಲಾ ಕ್ಲಿನಿಕ್ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆʼʼ ಎಂದು ಟೀಕಿಸಿದ್ದಾರೆ.

ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಸೂಚನೆಯ ಬಳಿಕ ಪಕ್ಷದ ಪ್ರಮುಖ ಆರೋಗ್ಯ ಯೋಜನೆ ಇದೀಗ ಕೇಂದ್ರ ಸರ್ಕಾರದ ಪರಿಶೀಲನೆಗೆ ಒಳಪಟ್ಟಿದೆ.

ಇದನ್ನೂ ಓದಿ: Delhi Liquor scam: ಅರವಿಂದ್ ಕೇಜ್ರಿವಾಲ್‌ಗೆ ಇ.ಡಿ ಸಮನ್ಸ್! ಇದು ಅರೆಸ್ಟ್ ಮಾಡುವ ಸಂಚು; ಆಪ್

ಏನಿದು ಯೋಜನೆ?

ದೆಹಲಿ ನಿವಾಸಿಗಳ ಮನೆ ಬಾಗಿಲಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ಮೊಹಲ್ಲಾ ಕ್ಲಿನಿಕ್ ಯೋಜನೆ ಹೊಂದಿದೆ. ಈ ಹೈಪರ್ ಲೋಕಲ್ ಕ್ಲಿನಿಕ್ ದೆಹಲಿಯ ಮೂಲ ನಿವಾಸಿಗಳು ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದ ವಲಸೆ ಬರುವವರ ಅಗತ್ಯವನ್ನೂ ಪೂರೈಸುತ್ತದೆ. ಗಣನೀಯ ಪ್ರಮಾಣದಲ್ಲಿ ರೋಗಿಗಳ ಹೊರೆಯನ್ನು ಇದು ಕಡಿಮೆ ಮಾಡುತ್ತದೆ. ಕೊಳೆಗೇರಿ ನಿವಾಸಿಗಳು, ಬಡವರಿಗೆ ಸುಲಭವಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಿದೆ.

Exit mobile version