ಭೋಪಾಲ್: ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ (Emergency) ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಇಂದಿಗೆ ತುರ್ತು ಪರಿಸ್ಥಿತಿ ಹೇರಿ 49 ವರ್ಷ ಕಳೆದಿದೆ. 1975ರ ಜೂನ್ 25ರಂದು ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ಬಿಜೆಪಿ ಆಗಾಗ ಪ್ರಸ್ತಾಪಿಸಲುತ್ತಲೇ ಇರುತ್ತದೆ. ಇದೀಗ ಮಧ್ಯ ಪ್ರದೇಶ (Madhya Pradesh)ದ ಬಿಜೆಪಿ ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಕುರಿತು ಅಧ್ಯಾಯವೊಂದನ್ನು ಅಳವಡಿಸಲು ಮುಂದಾಗಿದೆ. ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಅಧ್ಯಾಯ 1975ರಲ್ಲಿ ಕಾಂಗ್ರೆಸ್ ಸರ್ಕಾರವು ಹೇರಿದ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ʼಅತಿರೇಕಗಳು ಮತ್ತು ದಬ್ಬಾಳಿಕೆʼಯನ್ನು ವಿವರಿಸಲಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ʼʼ1975ರಿಂದ 1977ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿನ ಹೋರಾಟದ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದು ಈ ಕ್ರಮದ ಹಿಂದಿನ ಉದ್ದೇಶʼʼ ಎಂದು ಹೇಳಿದ್ದಾರೆ.
लोकतंत्र के प्रहरियों को सादर प्रणाम…
— Dr Mohan Yadav (@DrMohanYadav51) June 26, 2024
आज मुख्यमंत्री निवास में आयोजित "लोकतंत्र सेनानी प्रादेशिक सम्मेलन" में पधारे लोकतंत्र सेनानियों को सम्मानित किया।
भारत में लोकतंत्र की पुनर्स्थापना के लिए आपने जो संघर्ष किया है, उसके लिए समस्त देशवासी आपके कृतज्ञ हैं तथा मैं आप सबको यह… pic.twitter.com/HPGCbaTglH
“ದೇಶದಲ್ಲಿ ಅಂದು ಚಾಲ್ತಿಯಲ್ಲಿದ್ದ ಪರಿಸ್ಥಿತಿಗಳು, ದಬ್ಬಾಳಿಕೆ ಮತ್ತು ಆಗಿನ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮವನ್ನು ವಿರೋಧಿಸಿದ ಲೋಕತಂತ್ರ ಸೇನಾನಿ (ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರು)ಗಳ ಹೋರಾಟವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು” ಮೋಹನ್ ಯಾದವ್ ತಿಳಿಸಿದ್ದಾರೆ.
ವಿವಿಧ ಸೌಲಭ್ಯ
ಅಲ್ಲದೆ ಅವರು ಲೋಕತಂತ್ರ ಸೇನಾನಿಗಳಿಗೆ ವಿವಿಧ ಸವಲತ್ತುಗಳನ್ನು ಘೋಷಿಸಿದ್ದಾರೆ. ಶೇ. 50ರಷ್ಟು ರಿಯಾಯಿತಿಯೊಂದಿಗೆ ಲೋಕತಂತ್ರ ಸೇನಾನಿಗಳು ಮೂರು ದಿನಗಳ ಕಾಲ ಸರ್ಕಾರಿ ಸರ್ಕ್ಯೂಟ್ ಮತ್ತು ವಿಶ್ರಾಂತಿ ಗೃಹಗಳಲ್ಲಿ ಉಳಿಯಬಹುದು. ಹೆದ್ದಾರಿಗಳ ಟೋಲ್ ಮೊತ್ತದಲ್ಲಿ ರಿಯಾಯಿತಿ ದೊರೆಯಲಿದೆ. ತಮ್ಮ ಆಯುಷ್ಮಾನ್ ಆರೋಗ್ಯ ಕಾರ್ಡ್ ಮೂಲಕ ಪಡೆದ ಚಿಕಿತ್ಸೆಗಾಗಿ ಮಾಡಿದ ವೆಚ್ಚವನ್ನು ತ್ವರಿತವಾಗಿ ಪಾವತಿಸಲು ಕ್ರಮ ಕೂಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದಲ್ಲದೆ ಲೋಕತಂತ್ರ ಸೇನಾನಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳ ಎದುರಾದರೆ ಅವರಿಗೆ ಏರ್ ಆಂಬ್ಯುಲೆನ್ಸ್ ನೆರವು ಒದಗಿಸಲಾಗುತ್ತದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಲೋಕತಂತ್ರ ಸೇನಾನಿಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. ಜತೆಗೆ ಅಂತ್ಯಸಂಸ್ಕಾರಕ್ಕಾಗಿ ಅವರ ಕುಟುಂಬಸ್ಥರಿಗೆ ನೀಡುವ ಸಹಾಯಧನವನ್ನು 8,000 ರೂ.ಯಿಂದ 10,000 ರೂ.ಗೆ ಏರಿಸಲಾಗುವುದು. ಅವರ ಕುಟುಂಬದ ಸದಸ್ಯರಿಗೆ ಅಗತ್ಯ ತರಬೇತಿ ನೀಡಿ ಉದ್ಯೋಗಾವಕಾಶವನ್ನೂ ನೀಡಲಾಗುವುದು ಎಂದು ಮೋಹನ್ ಯಾದವ್ ಘೋಷಿಸಿದ್ದಾರೆ.
ಇದನ್ನೂ ಓದಿ: Lok Sabha Speaker: ತುರ್ತು ಪರಿಸ್ಥಿತಿ ಬಗ್ಗೆ ಓಂ ಬಿರ್ಲಾ ಪ್ರಸ್ತಾಪ; ಪ್ರತಿಪಕ್ಷಗಳಿಂದ ಪ್ರತಿಭಟನೆ
1975ರ ಜೂನ್ 25ರಂದು ಏನಾಯ್ತು?
ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು 1975ರ ಜೂನ್ 24ರಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಹೀಗಾಗಿ ಅದರ ಮಾರನೇ ದಿನ ಅಂದರೆ ಜೂನ್ 25ರಂದು ಇಂದಿರಾ ಗಾಂಧಿ ಅವರ ಸೂಚನೆ ಮೇರೆಗೆ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ವೇಳೆ ಹಲವು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು. ಪ್ರತಿಪಕ್ಷದ ನಾಯಕರನ್ನು ಮತ್ತು ಸರ್ಕಾರದ ನಡೆಯನ್ನು ಟೀಕಿಸುವವರನ್ನು ಬಂಧಿಸಲಾಗಿತ್ತು. ಅಲ್ಲದೆ ಮಾಧ್ಯಮಗಳಿಗೆಂದೇ ಮಾರ್ಗಸೂಚಿಯನ್ನು ಜಾರಿ ಮಾಡಲಾಗಿತ್ತು. ಸುಮಾರು 2 ವರ್ಷಗಳ ಬಳಿಕ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಯಿತು.