Site icon Vistara News

Mohan Yadav: ಮಧ್ಯಪ್ರದೇಶಕ್ಕೆ ಮೋಹನ್ ಯಾದವ್ ನೂತನ ಮುಖ್ಯಮಂತ್ರಿ

Mohan Yadav

ನವದೆಹಲಿ: ಭಾರತೀಯ ಜನತಾ ಪಾರ್ಟಿಯು (BJP Party) ಮಧ್ಯ ಪ್ರದೇಶದ (Madhya Pradesh) ನೂತನ ಮುಖ್ಯಮಂತ್ರಿಯನ್ನಾಗಿ ಮೋಹನ್ ಯಾದವ್ (Mohan Yadav) ಅವರನ್ನು ಆಯ್ಕೆ ಮಾಡಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ವಾರದ ಬಳಿಕ ಸೋಮವಾರ ಶಾಸಕರ ಸಭೆಯನ್ನು ನಡೆಸಿ, ಅಂತಿಮವಾಗಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಜತೆಗೆ ಜಗದೀಶ್ ದೇವರಾ ಮತ್ತು ರಾಜೇಶ್ ಶುಕ್ಲಾ ಅವರನ್ನು ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ನೇಮಕ ಮಾಡಲಾಗಿದೆ. ಮಧ್ಯ ಪ್ರದೇಶದಲ್ಲಿ ಸಂಪೂರ್ಣವಾಗಿ ನಾಯಕತ್ವವನ್ನು ಹೊಸ ಪೀಳಿಗೆಗೆ ವರ್ಗಾವಣೆ ಮಾಡಲಾಗಿದೆ.

ಉಜ್ಜೈನ್ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿರುವ 58 ವರ್ಷದ ಮೋಹನ್ ಯಾದವ್ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಯಾದವ್ ಅವರಿಗೆ ಆರೆಸ್ಸೆಸ್ ಬೆಂಬಲ ಕೂಡ ಇದೆ. ಮೋಹನ್ ಯಾದವ್ ಅವರು ಈವರೆಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಮತ್ತು ರಾಜ್ಯಸಭಾ ಸಂಸದ ಕೆ ಲಕ್ಷ್ಮಣ್ ಅವರು ವೀಕ್ಷಕರಾಗಿ ಆಗಮಿಸಿದ್ದರು. ಹೊಸದಾಗಿ ಚುನಾಯಿತ ಶಾಸಕರೊಂದಿಗೆ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದ ನಂತರ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸಲಾಯಿತು.

ಮುಖ್ಯಮಂತ್ರಿ ಹುದ್ದೇ ರೇಸಿನಲ್ಲಿದ್ದ ಕೇಂದ್ರ ಮಾಜಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಮಧ್ಯ ಪ್ರದೇಶ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ವಾಸ್ತವದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಬಳಿಕ, ತೋಮರ್ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡುತ್ತಾರೆಂಬ ಸುದ್ದಿಗಳಿದ್ದವು. ಈಗ ಭಾರತೀಯ ಜನತಾ ಪಾರ್ಟಿಯು ಎಲ್ಲ ಉಹಾಪೋಹಗಳಿಗೆ ತೆರೆ ಎಳೆದಿದ್ದು, ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿತ್ತು.

ಭಾರೀ ಆಡಳಿತ ವಿರೋಧಿ ಅಲೆಯ ನಡುವೆಯ ಬಿಜೆಪಿ ಸರ್ಕಾರವು 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಮಧ್ಯ ಪ್ರದೇಶದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷವು ಕೇವಲ 65 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು.

ಈ ಸುದ್ದಿಯನ್ನೂ ಓದಿ: Chhattisgarh CM: ವಿಷ್ಣು ದೇವ ಸಾಯಿ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ

Exit mobile version