ಭೋಪಾಲ್: ಬಹುದಿನಗಳಿಂದಲೂ ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ, ಈಗಾಗಲೇ 20 ಜನರನ್ನು ತೀವ್ರವಾಗಿ ಗಾಯಗೊಳಿಸಿರುವ ನಟೋರಿಯಸ್ ಕೋತಿ ಅಂತೂ ಸೆರೆ ಸಿಕ್ಕಿದೆ (Monkey Captured) ಸತತ ಎರಡು ವಾರಗಳಿಂದ ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿದ್ದ ಈ ಕೋತಿ ಸೆರೆ ಹಿಡಿಯಲು ಸಿಕ್ಕಾಪಟೆ ಪ್ರಯತ್ನಗಳು ನಡೆದಿದ್ದವು. ಯಾರಾದರೂ ಈ ಮಂಗನನ್ನು ಸೆರೆ ಹಿಡಿಯಲು (Monkey Captured In Madhya Pradesh) ಸಹಾಯ ಮಾಡಿದರೆ, ಸೆರೆ ಹಿಡಿದುಕೊಟ್ಟರೆ ಅವರಿಗೆ 21 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿಯೂ ಹೇಳಲಾಗಿತ್ತು.
ಇದು ಮಧ್ಯಪ್ರದೇಶದ ಕೋತಿ. ಅಲ್ಲಿನ ರಾಜ್ಗಢ್ ಎಂಬಲ್ಲಿ ಈ ಕೋತಿ ಹಾವಳಿ ಮಿತಿಮೀರಿತ್ತು. ಅದನ್ನು ಈಗ ಬಂಧಿಸಿ ಬೋನಿನಲ್ಲಿ ಹಾಕಿದ್ದಾರೆ. ಆಕ್ರಮಣಕಾರಿ ಕೋತಿಯನ್ನು ಹಿಡಿಯಲು ಉಜ್ಜಯಿನಿಯಿಂದ ಅರಣ್ಯ ಇಲಾಖೆಯ ಒಂದು ತಂಡ ಸಜ್ಜಾಗಿ ರಾಜ್ಗಢ್ಗೆ ಬಂದಿತ್ತು. ಜಿಲ್ಲಾಧಿಕಾರಿ, ಸ್ಥಳೀಯ ಆಡಳಿತಾಧಿಕಾರಿಗಳು ಇದ್ದರು. ಮಂಗ ಇರುವ ಸ್ಥಳ ಪತ್ತೆ ಹಚ್ಚಲು ಡ್ರೋನ್ ಕೂಡ ಬಳಕೆ ಮಾಡಲಾಗಿತ್ತು. ಮಂಗ ಕಾಣಿಸಿದಾಗ ಅದಕ್ಕೆ ಅರಿವಳಿಕೆ ಚುಚ್ಚುಮದ್ದು ಹಾಕಿ, ಅಂದರೆ ಈ ಅರಿವಳಿಕೆಯನ್ನು ದೂರದಿಂದಲೇ ಕೋತಿಗೆ ಎಸೆಯಲಾಯಿತು. ಅದು ಎಚ್ಚರ ತಪ್ಪುತ್ತಿದ್ದಂತೆ, ಅದರ ಮೇಲೆ ಬಲೆ ಬೀಸಲಾಯಿತು. ಹೀಗೆ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಾಗ ದೊಡ್ಡ ಹೈಡ್ರಾಮಾವೇ ನಡೆಯಿತು. ಅಲ್ಲಿದ್ದ ಜನರೆಲ್ಲ ಜೈಶ್ರೀರಾಮ್, ಜೈ ಬಜರಂಗಬಲಿ ಎಂದು ದೊಡ್ಡದಾಗಿ ಘೋಷಣೆ ಕೂಗುತ್ತಿದ್ದರು.
21 ಸಾವಿರ ಬಹುಮಾನ ಘೋಷಿಸಿದ್ದು ಯಾರು?
ಕೋತಿ ಹಾವಳಿ ತಡೆಯಲಾಗದೆ ರಾಜ್ಗಢ್ ಪುರಸಭೆ ಅಧ್ಯಕ್ಷ ವಿನೋದ್ ಸಾಹು ಅವರು ಹೀಗೆ 21 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ಯಾರಾದರೂ ಕೋತಿಯನ್ನು ಹಿಡಿದರೆ ಅವರಿಗೆ ಹಣ ಕೊಡುವುದಾಗಿ ತಿಳಿಸಿದ್ದರು. ಅದರಂತೆ ಈಗ ಅರಣ್ಯ ಇಲಾಖೆಯ ರಕ್ಷಣಾ ತಂಡಕ್ಕೆ 21 ಸಾವಿರ ರೂಪಾಯಿ ನಗದು ಬಹುಮಾನ ಸಿಗಲಿದೆ.
ಇದನ್ನೂ ಓದಿ: ಕೋತಿಯೆಂದರೆ ಹನುಮಂತ; ಮೃತ ಮಂಗಕ್ಕೆ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರ, ರಾತ್ರಿಯಿಡೀ ಭಜನೆ!
ಈ ಭಾಗದ ಜನ ಕೋತಿಯಿಂದ ಪಟ್ಟ ಪಡಿಪಾಟಲು ಅಷ್ಟಿಷ್ಟಾಗಿರಲಿಲ್ಲ. ಮನೆಗಳ ಕಿಟಕಿಗಳು, ಮೇಲ್ಛಾವಣಿ ಮೇಲೆ ಬಂದು ಕುಳಿತು ಕೋಪದಲ್ಲಿ ಕೂಗುತ್ತಿತ್ತು. ಅಲ್ಲೆಲ್ಲಾದರೂ ಮನುಷ್ಯರು ಕಂಡರೆ ಕ್ಷಣಮಾತ್ರದಲ್ಲಿ ಅವರ ಮೇಲೆ ಹಾರಿ ಪರಚುತ್ತಿತ್ತು. ಕಳೆದ 15ದಿನಗಳಲ್ಲಿ 8 ಮಕ್ಕಳು ಸೇರಿ 20 ಮಂದಿಗೆ ಗಾಯಗೊಳಿಸಿದೆ. ಕೆಲವರಂತೂ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಈ ಕೋತಿಯ ಪುಂಡಾಟ ಸೆರೆಯಾಗಿತ್ತು. ಒಬ್ಬ ವೃದ್ಧನ ಮೇಲೆ ಎರಗಿದ್ದ ಮಂಗ ಅವರನ್ನು ನೆಲದ ಮೇಲೆ ಬೀಳಿಸಿ, ಎಳೆದಿತ್ತು. ಅವರ ತೊಡೆಗೆ ಗಂಭೀರ ಸ್ವರೂಪದ ಗಾಯವನ್ನು ಮಾಡಿತ್ತು. ಅಂಥ ಪ್ರಾಣಿ ಈಗ ಬೋನು ಸೇರಿದೆ. ದೂರದ ದಟ್ಟಾರಣ್ಯದಲ್ಲಿ ಈ ಕೋತಿಯನ್ನು ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ